ಹುಕ್ಕಾಬಾರ್ ಗಳ ನಿಯಂತ್ರಣಕ್ಕೆ ಕಾನೂನು ಜಾರಿ: ಗೃಹ ಸಚಿವ ಜಿ.ಪರಮೇಶ್ವರ್
ಬೆಳಗಾವಿ: ‘ರಾಜ್ಯದಲ್ಲಿನ ಹುಕ್ಕಾಬಾರ್ ಗಳನ್ನು ನಿಯಂತ್ರಣ ಮಾಡಲು ಅಗತ್ಯ ಕಾನೂನು ಜಾರಿಗೆ ತರಲು ಕ್ರಮ ವಹಿಸಲಾಗುವುದು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಇನ್ನಿತರ ನಗರಗಳಲ್ಲಿನ ಹುಕ್ಕಾಬಾರ್ ಸೇರಿದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ಬೆಂಗಳೂರು ನಗರದಲ್ಲಿ ಹುಕ್ಕಾಬಾರ್ ಗಳ ಪ್ರಮಾಣ ಹೆಚ್ಚಾಗಿದೆ. ದೊಡ್ಡ ಪೈಪ್ ಮೂಲಕ ಬೇರೆ ಬೇರೆ ಪ್ಲೇವರ್ ಗಳನ್ನು ಸೇರಿಸಿ ಧೂಮಪಾನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಹುಕ್ಕಾಬಾರ್ ಗಳಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಯಾವುದೇ ರೀತಿಯ ಪರವಾನಗೆ ನೀಡುವುದಿಲ್ಲ. ಆದರೆ, ಕಾಫಿ, ಟೀ ಬಾರ್ ಮಾದರಿಯಲ್ಲೇ ಹುಕ್ಕಾಬಾರ್ ಗಳ ಮಾಲಕರು 2022ರಿಂದಲೂ ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆದು ಹುಕ್ಕಾಬಾರ್ ಗಳನ್ನು ನಡೆಸುತ್ತಿದ್ದಾರೆ. ಕೋರ್ಟ್ ಕೂಡ ಹುಕ್ಕಾ ಸೇದಲು ಪ್ರತ್ಯೇಕ ಕೊಠಡಿ ಸ್ಥಾಪಿಸಬೇಕೆಂದು ಸೂಚನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಹುಕ್ಕಾಬಾರ್ ಗಳ ನಿಯಮಗಳನ್ನು ಪಾಲನೆ ಮಾಡದಿದ್ದ ವೇಳೆ, ದೂರುಗಳು ಬಂದರೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಮಾತ್ರ ಅವಕಾಶವಿದೆ. ಆದರೆ ಹುಕ್ಕಾಬಾರ್ ಗಳ ಮೇಲೆ ನಿಯಂತ್ರಣ ಸಾಧಿಸಲು ನಮಗೆ ಅವಕಾಶಗಳಿಲ್ಲ ಎಂದರು.
ಹುಕ್ಕಾಬಾರ್ ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯುವಕರನ್ನು ಮಾದಕ ವ್ಯಸನಗಳಿಂದ ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಬಿಬಿಎಂಪಿ, ಪೊಲೀಸ್ ಹಾಗೂ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳ ಸಹಿತ ಸಂಬಂಧಪಟ್ಟ ಇಲಾಖೆಗಳ ಜತೆಗೆ ಸಮಾಲೋಚನೆ ನಡೆಸಿ ಹುಕ್ಕಾಬಾರ್ ಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ರೂಪಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
20ಕೋಟಿ ರೂ.ಮಾದಕ ವಸ್ತುಗಳ ವಶ: ಪೊಲೀಸ್ ಸಿಬ್ಬಂದಿ ಮಾದಕ ವಸ್ತುಗಳು ಹಾಗೂ ಹುಕ್ಕಾಬಾರ್ ಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ಸಾಮಾಜಿಕ ಪಿಡುಗಿನ ವಿರುದ್ಧ ನಿರಂತರವಾದ ಕಾರ್ಯಾಚರಣೆ ನಡೆಸುತ್ತಲೇ ಬಂದಿದ್ದಾರೆ. ನಿನ್ನೆಯಷ್ಟೇ ನಮ್ಮ ಸಿಬ್ಬಂದಿ ಸುಮಾರು 20 ಕೋಟಿ ರೂ.ಮೊತ್ತದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ನೈಜೀರಿಯಾ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆಂದು ಮಾಹಿತಿ ನೀಡಿದರು.
ನಿಷೇಧ ಹೇರಬೇಕು: ಆರಂಭಕ್ಕೆ ಮಾತನಾಡಿದ ಬಿಜೆಪಿಯ ಸುರೇಶ್ ಕುಮಾರ್, ಸಿ.ಕೆ.ರಾಮಮೂರ್ತಿ ಹಾಗೂ ಅರವಿಂದ ಬೆಲ್ಲದ್, ರಾಜ್ಯದ ಮಕ್ಕಳನ್ನು ಮಾದಕ ವ್ಯಸನಗಳಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ಹುಕ್ಕಾಬಾರ್ ಗಳನ್ನು ನಿಷೇಧಿಸಬೇಕು. ಈಗಾಗಲೇ ಪಂಜಾಬ್, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಹುಕ್ಕಾಬಾರ್ ಗಳನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿಯೂ ಅದೇ ಮಾದರಿಯಲ್ಲೇ ಹುಕ್ಕಾಬಾರ್ ಗಳ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು.