ಎಐಸಿಸಿ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಬಿಜೆಪಿ ನಾಯಕರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇ ಪದೇ ನನ್ನ ಹೆಸರು ಜಪಿಸುತ್ತಿದ್ದಾರೆ. ಅವರಿಗೆ ನಾನೇ ಮನೆ ದೇವರು. ದಿನಕ್ಕೆ ಒಂದೆರಡು ಬಾರಿ ನನ್ನ ಹೆಸರು ಹೇಳದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ, ತಿಂದಿರುವ ಊಟ ಕರಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಗಾರಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕಕ್ಕೆ ಏಕೆ ಪದೇ ಪದೇ ಬರುತ್ತಾರೆ? ಎಂಬುದು ಇಲ್ಲಿರುವ ಅಸಮರ್ಥ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಇಲ್ಲಿ ಬಿಜೆಪಿ ನಾಯಕರು ಅಸಮರ್ಥರು ಎಂದು ಮೋದಿಗೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಬಿಜೆಪಿಯ 25 ಸಂಸದರು ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಏನು ತಂದಿದ್ದಾರೆ. ಈವರೆಗೆ ನಮ್ಮ ರಾಜ್ಯಕ್ಕೆ ಬರ ಪರಿಹಾರ ಬಂದಿಲ್ಲ. ದೊಡ್ಡ ಯೋಜನೆಗಳು ಬಂದಿಲ್ಲ. ನರೇಗಾ ಯೋಜನೆಯ ಮಾನವ ದಿನಗಳನ್ನು ಹೆಚ್ಚಿಸುವಂತೆ ಮಾಡಿರುವ ಮನವಿಗೆ ಸ್ಪಂದಿಸಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಾಡಿಗೆ ಭಾಷಣಕಾರ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಾಟ್ಸಪ್ ಯೂನಿವರ್ಸಿಟಿಯಿಂದ ಕಲಿತು, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದೆ ಆತನ ಕೆಲಸ. ಬಿಜೆಪಿ ಸರಕಾರದ ಅವಧಿಯಲ್ಲಿ ಸುಳ್ಳು ಹೇಳಲು ಕೋಟ್ಯಂತರ ರೂ. ಪಡೆಯುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಯಾವುದರಲ್ಲಿ ನಂಬಿಕೆ ಇದೆಯೋ ಅದರಂತೆ ನಡೆದುಕೊಳ್ಳುತ್ತಾರೆ. ನಾನು ಶರಣಬಸವೇಶ್ವರ ದೇವಸ್ಥಾನ, ದರ್ಗಾಗೆ ಭೇಟಿ ನೀಡುತ್ತೇನೆ. ಎಲ್ಲರಿಗೂ ಸಮಾನತೆಯಿಂದ ದಾಸೋಹ ನೀಡುವಂತಹ ಕ್ಷೇತ್ರಗಳಿಗೆ ಹೋಗುತ್ತೇನೆ ಎಂದರು.