ʼಗ್ಯಾರಂಟಿʼ ಅನುಷ್ಠಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಬಸವರಾಜ ಬೊಮ್ಮಾಯಿ
ಬೆಂಗಳೂರು: ‘ಸರಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಅವುಗಳು ಎಷ್ಟು ಜನರಿಗೆ ತಲುಪಿವೆ ಎಂದು ಶ್ವೇತಪತ್ರ ಹೊರಡಿಸಲಿ’ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅತಿ ಹೆಚ್ಚು ಸಾಲ ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಮತ್ತಷ್ಟು ಸಾಲ ಮಾಡುತ್ತಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮಾಡಿದ ಸಾಲದ ಹಣವನ್ನು ನಾವು ತೀರಿಸಿದ್ದೇವೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ತೆರಿಗೆ ಹಣ ಕಡಿಮೆಯಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿಯೆ ಅತಿಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿದ್ದು, ಗಣಿ ಬಾಧಿತ ನಾಲ್ಕು ಜಿಲ್ಲೆಗಳ ಅಭಿವೃದ್ಧಿಗೆ 25ಸಾವಿರ ಕೊಟಿ ರೂ.ನಾವು ತಂದಿದ್ದೇವೆ. ಅದನ್ನು ಬಳಕೆ ಮಾಡಲು ಈಗಿನ ಸರಕಾರ ಯೋಜನೆ ರೂಪಿಸಲಿ ಎಂದು ಬೊಮ್ಮಾಯಿ ಸಲಹೆ ನೀಡಿದರು.
ಕಾಂಗ್ರೆಸ್ ನವರು ರಾಜ್ಯದಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ದಿಲ್ಲಿಯಲ್ಲಿ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ. ಫೆ.7ರಂದು ಸಿದ್ದರಾಮಯ್ಯ ಸರಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.
ಕೇಂದ್ರದಿಂದ ಬರ ಪರಿಹಾರ ಕೊಡಿಸಲು ಬಿಜೆಪಿ ಮಾಡಿರುವ ಪ್ರಯತ್ನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಂಸದರು ಕೇಂದ್ರ ಸರಕಾರದ ಜೊತೆಗೆ ಮಾತನಾಡಿದ್ದಾರೆ. ಶೀಘ್ರವೇ ಕೆಂದ್ರದಿಂದ ಬರ ಪರಿಹಾರ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.