ಬಿಜೆಪಿಗರು ಮೋದಿ ಭಕ್ತಿಯನ್ನು ಬಿಟ್ಟು ದೈವ ಭಕ್ತಿಯನ್ನು ಬೆಳಸಿಕೊಳ್ಳಲಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬಿಜೆಪಿ ನಾಯಕರು ಮೋದಿ ಭಕ್ತರಾಗುವ ಬದಲು ದೈವ ಭಕ್ತರಾಗಿದ್ದರೆ ದ್ವೇಷ ಗುಣದ ಬದಲು ಧರ್ಮ ಗುಣ ಬರುತ್ತಿತ್ತು, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಸುಳ್ಳುಗಳ ಸ್ಟಡಿ ಮಾಡುವ ಬದಲು ದೇವಸ್ಥಾನಕ್ಕೆ ಹೋಗಿದ್ದರೆ ಸತ್ಯ ದರ್ಶನವಾಗುತ್ತಿತ್ತು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯ ಸರ್ಕಾರ ದೇವಸ್ಥಾನಗಳ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ದೇವಾಲಯಗಳ ಹಣವನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳುವ ನಿಯಮ ರೂಪಿಸಿದ್ದ ಬಿಜೆಪಿ ಹಿಂದೂ ವಿರೋಧಿಯೋ? ದೇವಾಲಯಗಳ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸುವ ನಿಯಮ ರೂಪಿಸಿದ ಕಾಂಗ್ರೆಸ್ ಹಿಂದೂ ವಿರೋಧಿಯೋ? ಈ ಸತ್ಯವನ್ನು ಬಿಜೆಪಿ ನಾಯಕರು ದೇವಸ್ಥಾನಗಳಿಗೆ ಹೋಗಿ ಅರ್ಚಕರನ್ನು ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.
2011ರಲ್ಲಿ ಮಾನ್ಯ ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಮಾನ್ಯ ವಿ ಎಸ್ ಆಚಾರ್ಯರವರು ಮುಜರಾಯಿ ಸಚಿವರಾಗಿದ್ದಾಗ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿದೇಯಕವನ್ನು ಮಂಡಿಸಲಾಗಿತ್ತು. 10%ನಷ್ಟು ಹಣವನ್ನು ಸರ್ಕಾರ ಬಳಸಿಕೊಳ್ಳಲು ಅವಕಾಶವಿರುವ ಆ ವಿದೇಯಕದ ಲೋಪವನ್ನು ನಾವು ಸರಿಪಡಿಸಿದ್ದೇವೆ. A ಗ್ರೇಡ್ ದೇವಾಲಯಗಳ ಹಣವನ್ನು C ಗ್ರೇಡ್ ದೇವಾಲಯಗಳ ಅಭಿವೃದ್ಧಿಗೆ ಹಾಗೂ ಅರ್ಚಕರ ಶ್ರೇಯೋಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗುವಂತೆ ನಿಯಮ ರೂಪಿಸಿದ್ದೇವೆ ಎಂದಿದ್ದಾರೆ.
ಸತ್ಯ ಹೇಳುವವರನ್ನು ಹಿಂದೂ ವಿರೋಧಿಗಳು ಎನ್ನುವುದು ಬಿಜೆಪಿಗರ ಹಳೆಯ ಚಾಳಿ, ಆ ಅಭ್ಯಾಸ ಬಲದಂತೆ ಸತ್ಯ ಹೇಳುವ ಅರ್ಚಕರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟಬೇಡಿ, ಅವರು ಧಾರ್ಮಿಕತೆಯ ನೈಜ ಪರಿಪಾಲಕರು. ಮೋದಿ ಭಕ್ತಿಯನ್ನು ಬಿಟ್ಟು ದೈವ ಭಕ್ತಿಯನ್ನು ಬೆಳಸಿಕೊಳ್ಳಲಿ, ಆಗಲಾದರೂ ದೇವರು ಬಿಜೆಪಿಯವರಿಗೆ ಒಳ್ಳೆಯ ವಿದ್ಯೆ, ಬುದ್ದಿ, ಜ್ಞಾನ ಕೊಡಬಹುದೇನೋ? ಎಂದು ಟ್ವೀಟ್ ಮಾಡಿದ್ದಾರೆ.