ಲಿಂಗಾಯತ ಅಧಿಕಾರಿಗಳ ಕುರಿತ ಶಾಮನೂರು ಪ್ರಶ್ನೆಗೆ ಸಿಎಂ ಉತ್ತರಿಸಲಿ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಅ.7: ಲಿಂಗಾಯತ ಅಧಿಕಾರಿಗಳ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎತ್ತಿರುವಂತಹ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಉತ್ತರ ನೀಡುವವರೆಗೂ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಾತಿಯ ಕರಿ ನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬರುತ್ತಿದೆ ಎಂದರು.
ವರ್ಗಾವಣೆ ವಿಷಯದಲ್ಲಿ ಬಹಳಷ್ಟು ಅಸಮಾಧಾನಕ್ಕೆ ಈಡಾಗಿದೆ. ಎಲ್ಲ ಸಮಾಜಕ್ಕೂ ನ್ಯಾಯ ಕೊಡುತ್ತೇವೆ ಅಂತ ಹೇಳಿದ್ದರು. ಆದರೆ ಅದು ಆಗಿಲ್ಲ. ಈಗ ಬೇರೆ ಬೇರೆ ರೂಪದಲ್ಲಿ ಅವರ ವೈಫಲ್ಯಗಳು ಹೊರಗೆ ಬರುತ್ತಿವೆ. ಆಡಳಿತದ ಮೇಲೆ ಜಾತಿಯ ಕರಿ ನೆರಳು ಬೀಳುವಂತದ್ದು ಒಳ್ಳೆಯ ಲಕ್ಷಣ ಅಲ್ಲ ಎಂದು ಅವರು ಹೇಳಿದರು.
ಪಂಚಾಯತಿಗೊಂದು ಮದ್ಯದ ಅಂಗಡಿ ತೆರೆಯುವುದನ್ನು ನಾವು ಮೊದಲೆ ವಿರೋಧ ಮಾಡಿದ್ದೇವೆ, ಜನ ಕೂಡ ವಿರೋಧ ಮಾಡಿದ್ದಾರೆ. ಗೃಹಲಕ್ಷ್ಮಿ ಅಂತ ದುಡ್ಡು ಕೊಟ್ಟು, ಅದರ ಎರಡು ಪಟ್ಟು ಆ ಸಂಸಾರದಿಂದ ಕಿತ್ತುಕೊಳ್ಳುವಂಥ ಕೆಲಸ ಸರಕಾರ ಮಾಡುತ್ತಿದೆ. ಸರಕಾರ ಅಬಕಾರಿ ನೀತಿಗಳನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.
ಮುಖ್ಯಮಂತ್ರಿ ಹೊಸ ಬಾರ್ ಲೈಸೆನ್ಸ್ ಕೊಡುವುದಿಲ್ಲ ಅಂತ ಹೇಳುತ್ತಾರೆ. ಉಪಮುಖ್ಯಮಂತ್ರಿ ಆಯಕಟ್ಟು ಜಾಗದಲ್ಲಿ ಬಾರ್ ಮಾಡಬೇಕಾಗುತ್ತದೆ ಅಂತ ಹೇಳುತ್ತಾರೆ. ಇವರ ನಿರ್ಣಯ ಗೊಂದಲದ ಗೂಡಾಗಿದೆ. ಮುಖ್ಯಮಂತ್ರಿ ಮಾಡುವಂತಹ ಎಲ್ಲ ನಿರ್ಣಯಗಳಿಗೆ ಉಪಮುಖ್ಯಮಂತ್ರಿ ವಿರೋಧ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಬರಗಾಲವಾಗಿ ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಬರಗಾಲಕ್ಕೆ ಇದುವರೆಗೂ ನಯಾ ಪೈಸೆ ಬಿಡುಗಡೆ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಅನಗತ್ಯವಾಗಿ ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ಬಳಿ ವಿಕೋಪ ನಿಧಿ ಇದೆ. ಅದನ್ನು ಬಿಡುಗಡೆ ಮಾಡಿ, ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅವರು ಹೇಳಿದರು.