24 ಗಂಟೆಯೊಳಗೆ ಈಶ್ವರಪ್ಪ ತಮ್ಮ ಹೇಳಿಕೆ ಹಿಂಪಡೆಯಲಿ: ಸಚಿವ ಎಚ್.ಕೆ.ಪಾಟೀಲ್
ʼಗುಂಡಿಕ್ಕಿ ಕೊಲ್ಲಬೇಕುʼ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ
ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿಯನ್ನು ಗುಂಡಿಕ್ಕಿ ಕೊಲ್ಲಬೇಕು, ಅಂತಹ ಕಾನೂನು ಜಾರಿಗೆ ತರಬೇಕು ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ 24 ಗಂಟೆಯೊಳಗೆ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಕೆಲವರು ತಾವು ಹೀರೋಗಳಾಗಿ ಬಿಡುತ್ತೇವೆ ಎಂಬ ಕಲ್ಪನಾ ಲೋಕದಲ್ಲಿ ಇರುತ್ತಾರೆ. ಅವರ ಮಾತುಗಳು ಬಹಳ ದೊಡ್ಡ ಪ್ರಮಾಣದ ದುಷ್ಪರಿಣಾಮವನ್ನು ಉಂಟು ಮಾಡಬಲ್ಲದು ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಈಶ್ವರಪ್ಪ 24 ಗಂಟೆಯೊಳಗೆ ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿದಂತೆ ಮುಂದಿನ ಕಾನೂನು ಕ್ರಮಗಳ ಕುರಿತು ವಿಚಾರ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.
ರಾಜ್ಯ ಸರಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾಡಿರುವ ಆರೋಪಗಳು ಆಧಾರ ರಹಿತವಾದದ್ದು. ಅವರ ಬಳಿ ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳು, ಆಧಾರಗಳು ಇದ್ದರೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾಹಿತಿ ನೀಡಲಿ ಎಂದು ಅವರು ತಿಳಿಸಿದರು.