ಗೋ ರಕ್ಷಣೆಗೂ ಮೊದಲು ಹಿಂದೂ ಸಂತರು ದಲಿತರ ಏಳಿಗೆಗೆ ಸಮಾವೇಶ ನಡೆಸಲಿ: ಬಿಎಸ್ಪಿ
ಬೆಂಗಳೂರು, ಆ.14: ಗೋವು ರಕ್ಷಣೆಗೂ ಮೊದಲು ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ಕುರಿತು ಹಿಂದೂ ಸಮಾಜದ ಸಂತರು, ಮುಖಂಡರು ಪ್ರಸ್ತಾಪಿಸಲಿ ಜತೆಗೆ, ದಲಿತರ ಏಳಿಗೆಗೆ ಸಮಾವೇಶ ನಡೆಸಲಿ ಎಂದು ಬಹುಜನ ಸಮಾಜ ಪಕ್ಷದ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಂತ ಸಮಾವೇಶ ನಡೆಸಿ ಗೋವು ರಕ್ಷಣೆಗೆ ನಿರ್ಣಯಗೊಳ್ಳಲಾಗಿರುವುದು ಹಾಸ್ಯಸ್ಪದ. ಎಂದಿಗೂ ಗೋವುಗಳ ಸಾಕಾಣಿಕೆ ಮಾಡದ ಸಂತರ, ಹಿಂದೂ ಮುಖಂಡರು, ಮೂಲ ಸಮಸ್ಯೆಗಳ ತಿಳಿವಳಿಕೆ ಇಲ್ಲದೆ ಸ್ವಾಮೀಜಿಗಳು ಭಾಷಣ ಮಾಡಿ ಗೋವು ಸಂಕ್ಷಣೆಗೆ ಕರೆ ನೀಡಿರುವುದು ಒಂದು ನಾಟಕವೇ ಸರಿ ಎಂದು ಟೀಕಿಸಿದರು.
ಹಲವು ಶತಮಾನಗಳಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಮರೆಮಾಚಲಾಗುತ್ತಿದೆ.ದೇಶಕ್ಕೆ ಸ್ವಾತಂತ್ರ್ಯ ಬಂದು 77ನೆ ವರ್ಷಕ್ಕೆ ಕಾಲಿಡುತ್ತಿದ್ದು, ಇಂದಿಗೂ ಸಹ ದೇಶದೆಲ್ಲೆಡೆ ಪ್ರತಿಗಂಟೆಗೆ ದಲಿತ ಸಮುದಾಯದವರ ಕೊಲೆಗಳಾಗುತ್ತಿವೆ. ಅದೇ ರೀತಿ ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ ಸೇರಿದಂತೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇದರ ವಿರುದ್ಧ ಒಬ್ಬ ಹಿಂದೂ ಮುಖಂಡನೂ, ಸಂತನೂ ಬಾಯಿ ಬಿಚ್ಚುತ್ತಿಲ್ಲವೇಕೆ ಎಂದು ಅವರು ಪ್ರಶ್ನೆ ಮಾಡಿದರು.