ಸಿದ್ದರಾಮಯ್ಯ ಆರು ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ: ಮಾಜಿ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ರಾಜ್ಯ ಸರಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಯೋಜನೆಯಲ್ಲಿ ಕಮಿಷನ್ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಹೊಸ ಸರಕಾರ ಬಂದಿದೆ ಎಂದು ಅನಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಆರು ತಿಂಗಳ ತಮ್ಮ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರಕಾರ ಬಂದು ಆರು ತಿಂಗಳು ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತೆಗೆದುಕೊಂಡು ಹೋಗಿದ್ದಾರೆ. ಎಷ್ಟೇ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಲಿ ಅದಕ್ಕೆ ತಕ್ಕಂತೆ ಆದಾಯ ಸಂಗ್ರಹ ಮಾಡಬೇಕು. ಗ್ಯಾರೆಂಟಿ ಹೆಸರಲ್ಲಿ ಜನರ ಮೇಲೆ ಹೊರೆ ಹಾಕಿರುವುದನ್ನು ಕಡಿಮೆ ಮಾಡಿ, ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಿ ಎಂದು ಅವರು ಸಲಹೆ ನೀಡಿದರು.
ನೀರಾವರಿಗೆ ಅನುದಾನ ಕೊರತೆ: ಕೃಷ್ಣಾ ಮೇಲ್ದಂಡೆ ಹಂತ 3 ರ ಕಾಮಗಾರಿಗೆ 5 ಸಾವಿರ ಕೋಟಿ ರೂ.ಬಿಡುಗಡೆ ಮಾಡಬೇಕು. ನಾವು 52 ಸಾವಿರ ಕೋಟಿ ರೂ. ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಭೂ ಪರಿಹಾರ ಮತ್ತು ಆರ್ ಅಂಡ್ ಆರ್ ಗೆ ಹಣ ಬಿಡುಗಡೆ ಮಾಡಬೇಕು. ಸುಮ್ಮನೆ ನ್ಯಾಯಾಲಯದ ನೆಪ ಹೇಳುತ್ತಾರೆ. ನ್ಯಾಯಾಲಯಕ್ಕೂ ಹಣ ಬಿಡುಗಡೆಗೂ ಸಂಬಂಧ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಸರಕಾರದಿಂದ ನೇರವಾಗಿ ಆಯಾ ಇಲಾಖೆಗೆ ಅನುದಾನ ಹೋಗುತ್ತಿದೆ. ಇನ್ನು ಬರಗಾಲ ಕಾಮಗಾರಿ ಸೇರಿದಂತೆ ಯಾವುದೇ ಪರಿಹಾರಕ್ಕೆ ಕೇಂದ್ರ ಸರಕಾರ ಅನುದಾನ ಕೊಡುತ್ತಿಲ್ಲ ಎಂದು ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ. ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ಅವರು ದಾಖಲೆ ಬಿಡುಗಡೆ ಮಾಡಲಿ, ನಾವು ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರಕಾರ ವಿಫಲವಾಗಿದೆ. ಗೃಹಲಕ್ಷ್ಮಿ ಯೋಜನೆ ಶೇ.35ರಷ್ಟು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಬರ ಪರಿಹಾರದ ವಿಚಾರದಲ್ಲಿಯೂ ರೈತರು ಫ್ರೂಟ್ಸ್ ನಲ್ಲಿ ದಾಖಲೆ ಸಲ್ಲಿಸದಿದ್ದರೆ ಜಿಲ್ಲಾಧಿಕಾರಿಗಳು ಹೊಣೆ ಎಂದು ಹೇಳುತ್ತಾರೆ. ಅದು ಕೃಷಿ ಇಲಾಖೆಯವರ ಜವಾಬ್ದಾರಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.