‘ಗ್ಯಾರಂಟಿ ಜಾರಿ’ ಕುರಿತು ಗುಪ್ತಚರ ಇಲಾಖೆಯಿಂದ ಪ್ರಧಾನಿ ವರದಿ ತರಿಸಿಕೊಳ್ಳಲಿ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಆ.5: ಕಾಂಗ್ರೆಸ್ ಸರಕಾರ ಜಾರಿಗೆ ತರುತ್ತಿರುವ ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಗುಪ್ತಚರ ಇಲಾಖೆಯಿಂದ ಈ ಗ್ಯಾರಂಟಿಗಳ ಜಾರಿಯಿಂದ ಆಗುತ್ತಿರುವ ಪರಿಣಾಮಗಳ ಕುರಿತು ವರದಿ ತರಿಸಿಕೊಳ್ಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಶನಿವಾರ ಕಲಬುರಗಿಯ ಎನ್.ವಿ.ಕಾಲೇಜು ಮೈದಾನದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ದೇಶದ ಜನರು ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಬಗ್ಗೆ ಶ್ಲಾಘಿಸುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಈ ಗ್ಯಾರಂಟಿಗಳು ಜಾರಿಗೆ ಬರುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡವರಿಗಾಗಿ, ಯುವಕರಿಗಾಗಿ, ಕೂಲಿ ಕಾರ್ಮಿಕರಿಗಾಗಿ, ಮಹಿಳೆಯರಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಈ ಹಿಂದಿನ ಅವಧಿಯಲ್ಲಿ ಜಾರಿಗೆ ತಂದರೂ ಕೂಡ ಜನರು ಯಾಕೋ ಆಶೀರ್ವಾದ ಮಾಡಲಿಲ್ಲ ಎಂದು ಅವರು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮನಸಿದ್ದರೆ ಮಾರ್ಗ ಸಿಗುತ್ತದೆ. ಯಾರು ಬಡವರ ಬಗ್ಗೆ ಚಿಂತನೆ ಮಾಡುತ್ತಾರೋ ಅವರು ಯೋಜನೆಗಳನ್ನು ಜಾರಿಗೆ ತರಲು ಹಣ ಹೊಂದಿಸುವ ಮಾರ್ಗವನ್ನು ಹುಡುಕುತ್ತಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ, ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿ ಕುಟುಂಬಕ್ಕೆ 15 ಲಕ್ಷ ಕೊಡುವುದಾಗಿ ಪ್ರಧಾನಿ ಹೇಳಿದ್ದರು. ಎಲ್ಲಿ ಹೋಯಿತು ಆ 15 ಲಕ್ಷ ರೂ.ಗಳು ಎಂದು ಅವರು ಪ್ರಶ್ನಿಸಿದರು.
ಈ ದೇಶ ಸುರಕ್ಷಿತವಾಗಿ ಉಳಿಯಬೇಕಾದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು. ಕಲ್ಯಾಣ ಕರ್ನಾಟಕದ ಜನರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮುಂದುವರೆಯಬೇಕು ಹಾಗೆ ಮುಂದುವರೆಯಲು ಧೈರ್ಯದ ಕೊರತೆ ಇಲ್ಲ. ನಾನು ವಿದ್ಯಾರ್ಥಿ ದೆಸೆಯಿಂದಲೆ ಇದೇ ಎನ್.ವಿ.ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನ ಮಹಾನ್ ನಾಯಕರು ಮಾಡಿದ ಭಾಷಣ ಕೇಳಿದ್ದೇನೆ ಎಂದು ತಮ್ಮ ವಿದ್ಯಾರ್ಥಿ ಜೀವನ ಮೆಲುಕು ಹಾಕಿ 371 ಜೆ ಅಡಿಯಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ವಹಿಸುವಂತೆ ಸಿಎಂ ಹಾಗೂ ಡಿಸಿಎಂ ಗೆ ಹೇಳಿದ ಅವರು, ಈ ಭಾಗದಿಂದ ನಿಮಗೆ ಯಾವಾಗಲೂ 25 ಸ್ಥಾನಗಳು ಬಂದಿವೆ. ಈ ಭಾಗದಲ್ಲಿ ಏನು ಅಭಿವೃದ್ದಿ ಮಾಡಬೇಕು ಎನ್ನುವುದರ ಬಗ್ಗೆ ನೀವಿಬ್ಬರೂ ಆಗಾಗ ಪ್ರಗತಿ ಪರಿಶೀಲನೆ ಮಾಡಬೇಕು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಈ ಭಾಗದ ಸಮಗ್ರ ಅಭಿವೃದ್ದಿಗೆ ಒತ್ತು ನೀಡಬೇಕು. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಬೇಕು. ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಸೇರಿದಂತೆ ಈ ಭಾಗದ ಎಲ್ಲ ಜಿಲ್ಲೆಗಳು ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ತಳಮಟ್ಟದಲ್ಲಿವೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.