ಯತ್ನಾಳ್ ಬಿಜೆಪಿ ಹಗರಣದ ದಾಖಲೆಗಳನ್ನು ಆಯೋಗದ ಮುಂದಿರಿಸಲಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಡಿ.28: ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ಉದ್ದೇಶವಿದ್ದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅವಧಿಯಲ್ಲಿ ನಡೆದಿರುವ ಕೊರೋನ ಹಗರಣದ ಬಗ್ಗೆ ದಾಖಲಾತಿಗಳನ್ನು ವಿಚಾರಣಾ ಆಯೋಗದ ಮುಂದಿರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬಿಜೆಪಿ ಶಾಸಕ ಯತ್ನಾಳ್ ಬಿಜೆಪಿ ಅವಧಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಡಿರುವ ಪ್ರಸ್ತಾಪದ ಬಗ್ಗೆ ಇಂದು ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯಿಸಿದರು.
ಕನ್ನಡ ನಾಡಿನಲ್ಲಿ ನಾಮಫಲಕದಲ್ಲಿ ಕನ್ನಡವಿರಲೇಬೇಕು :
ಕನ್ನಡಪರ ಸಂಘಟೆಗಳ ಕನ್ನಡ ನಾಮಫಲಕ ಹಾಕಬೇಕೆನ್ನುವ ಬಗ್ಗೆ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ನ್ಯಾಯದ ಪರ ಧ್ವನಿ ಎತ್ತುವ ಯಾವುದೇ ಹೋರಾಟಕ್ಕೂ ಸರಕಾರದ ವಿರೋಧವಿಲ್ಲ. ಸಂಘಟನೆಗಳು ಶಾಂತಿಯುತ ಪ್ರತಿಭಟನೆಗಳನ್ನು ಮಾಡಬೇಕು. ಆದರೆ ಕಾನೂನನ್ನು ಉಲ್ಲಂಘಿಸುವ ಕೆಲಸ ನಡೆದರೆ, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಂದು ಬಿಬಿಎಂಪಿ, ಪೊಲೀಸ್ ಇಲಾಖೆಗಳ ಜೊತೆ ಈ ವಿಷಯದ ಬಗ್ಗೆ ಸಭೆ ನಡೆಸಲಾಗುತ್ತದೆ. ಬೇರೆ ಭಾಷೆಯ ಬಗ್ಗೆ ವಿರೋಧವಿಲ್ಲವಾದರೂ, ಕನ್ನಡ ನಾಡಿನಲ್ಲಿ ನಾಮಫಲಕದಲ್ಲಿ ಕನ್ನಡವಿರಲೇಬೇಕು ಎಂದರು.