ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು: "ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರವಾಗಿದೆ. ಹೀಗಾಗಿ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವವರು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದರು.
ಸದಾಶಿವನಗರ ನಿವಾಸದ ರವಿವಾರ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ ಸರಕಾರ ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ವಸೂಲಿ ಮಾಡಿದೆ ಎಂಬ ಪ್ರಧಾನಿ ಮೋದಿ ಅವರ ಆರೋಪದ ಬಗ್ಗೆ ಕೇಳಿದಾಗ, "ಪ್ರಧಾನಮಂತ್ರಿಗಳು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರು ಈ ಆರೋಪಗಳನ್ನು ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ. ಕೇಂದ್ರ ಸಚಿವರುಗಳು ಯಾವ ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಉನ್ನತ ಹುದ್ದೆಯಲ್ಲಿರುವವರು ಆಧಾರವಿಲ್ಲದೆ ಆರೋಪ ಮಾಡಬಾರದು" ಎಂದು ತಿಳಿಸಿದರು.
ʼಮಹಾರಾಷ್ಟ್ರ ಕಾಂಗ್ರೆಸ್ನವರು ಈ ಬಗ್ಗೆ ನಮ್ಮ ಜತೆ ಚರ್ಚೆಯನ್ನೇ ಮಾಡಿಲ್ಲ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ನಾಯಕರು ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಸುಳ್ಳು ಆರೋಪ ಮಾಡುತ್ತಿರುವ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆಹ್ವಾನ ನೀಡುತ್ತಿದ್ದು, ಅವರಿಗಾಗಿ 30 ವಿಶೇಷ ಬಸ್ ಹಾಗೂ ವಿಮಾನ ಪ್ರಯಾಣ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿ, ನಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ ಪತ್ರ ಬರೆಯುತ್ತಿದ್ದೇನೆ" ಎಂದು ತಿಳಿಸಿದರು.