ಸಿನೆಮಾ ಚಿತ್ರೀಕರಣ ವೇಳೆ ಲೈಟ್ ಮ್ಯಾನ್ ಮೃತ್ಯು: ಯೋಗರಾಜ್ ಭಟ್ ವಿರುದ್ಧ ಪ್ರಕರಣ ದಾಖಲು
ಯೋಗರಾಜ್ ಭಟ್ (PC: Fb)
ಬೆಂಗಳೂರು: ಸಿನೆಮಾ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಈ ಸಂಬಂಧ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ವಿ.ಆರ್.ಎಲ್ ಗೋಡೌನ್ನಲ್ಲಿ ಈ ಅವಘಡ ಸಂಭವಿಸಿದ್ದು, ಲೈಟ್ ಮ್ಯಾನ್ ಮೋಹನ್ ಕುಮಾರ್ ಮೃತಪಟ್ಟವರು.
ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನೆಮಾದ ಶೂಟಿಂಗ್ ಅಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್ನಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದೆ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ 30 ಅಡಿ ಎತ್ತರದ ಅಲ್ಯೂಮಿನಿಯಂ ರೊಸ್ಟ್ರಮ್ ಮೇಲೇರಿ ಲೈಟ್ ಬಿಚ್ಚುತ್ತಿದ್ದಾಗ ಆಯಾತಪ್ಪಿ ಮೋಹನ್ ಕುಮಾರ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಸಿನೆಮಾ ಚಿತ್ರೀಕರಣದ ವೇಳೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಮನದ ಕಡಲು ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಮಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.