ಲಿಂಗಾಯತ ಸ್ವತಂತ್ರ ಧರ್ಮ: ಡಾ.ಸಿದ್ದರಾಮ ಸ್ವಾಮೀಜಿ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆ
ಧಾರವಾಡ: ‘ಲಿಂಗಾಯತ ಧರ್ಮ ವನ್ನು ಸ್ವತಂತ್ರ ಧರ್ಮವೆಂದು ಸರಕಾರ ಮಾನ್ಯ ಮಾಡುವುದರಿಂದ ನಾವು ಹಿಂದೂ ವಿರೋಧಿ ಗಳಲ್ಲ. ಜೈನರು, ಸಿಖ್ಖರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಬದಲಾಗಿ ‘ಹಿಂದೂ’ ಅನ್ನುವಂತಹದ್ದು ಒಂದು ಧರ್ಮವೇ ಅಲ್ಲ’ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ರವಿವಾರ ಧಾರವಾಡದ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ನಡೆದ ಲಿಂಗಾಯತ ಮಠಾಧಿ ಪತಿಗಳ ಒಕ್ಕೂಟದ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಒಂದು ಜೀವನ ಮಾರ್ಗವಷ್ಟೇ. ಯಾವುದೇ ಒಂದು ಧರ್ಮ ಆಗಬೇಕಾದರೆ ಅದಕ್ಕೊಬ್ಬರು ಸ್ಥಾಪಕರಿರಬೇಕು. ಅದಕ್ಕೆ ಅದರದ್ದೇ ಆದ ಒಂದು ಸಂವಿಧಾನವಿರಬೇಕು. ಅವರು ಒಂದೇ ದೇವರನ್ನು ಪೂಜಿಸುವಂತಹವರು ಆಗಿರಬೇಕು. ಇದಕ್ಕೆ ಹಿಂದೂ ಪದ ಅನ್ವಯಿಸಲ್ಲ’ ಎಂದರು.
‘ಲಿಂಗಾಯತ ಅನ್ನುವುದು ಒಂದು ಸ್ವತಂತ್ರ ಧರ್ಮ. ಇದಕ್ಕೆ ಬಸವಣ್ಣನವರು ಸಂಸ್ಥಾಪಕರು. ವಚನ ಸಾಹಿತ್ಯ ಇದರ ಸಂವಿಧಾನ. ನಾವೆಲ್ಲರೂ ಇಷ್ಟ ಲಿಂಗವನ್ನು ಪೂಜಿಸುವಂತಹವರು. ಹಿಂದೂ ಧರ್ಮ ಎಂದು ನಾವೇನು ಹೇಳುತ್ತೇವೋ ಅಲ್ಲಿ ಯಾವುದೇ ಪ್ರವರ್ತಕ, ಪ್ರವಾದಿ ಇಲ್ಲ. ಅದಕ್ಕೊಂದು ನಿರ್ದಿಷ್ಟ ಗ್ರಂಥ ಆಗಲಿ, ದೇವರಾಗಲಿ ಇಲ್ಲ. 33 ಕೋಟಿ ದೇವತೆಗಳನ್ನು ಪೂಜಿಸುತ್ತಾರೆ. ಅದೊಂದು ವೈಧಿಕ ಧರ್ಮ’ ಎಂದು ಸ್ವಾಮೀಜಿ ತಿಳಿಸಿದರು.
‘ಇಂದು ಎಲ್ಲರೂ ಭಗವದ್ಗೀತೆಯ ಬಗ್ಗೆ ಮಾತನಾಡಲಾಗುತ್ತದೆ ಆದರೆ ಭಗವದ್ಗೀತೆಯ 18 ಅಧ್ಯಾಯದ ಯಾವ ಒಂದು ಶ್ಲೋಕದಲ್ಲೂ ಹಿಂದೂ ಎಂಬ ಶಬ್ಧ ಪ್ರಯೋಗವಾಗಿಲ್ಲ. ಜೊತೆಗೆ ವೇದಗಳಲ್ಲಿ, ಉಪನಿಷತ್ಗಳಲ್ಲೂ ಪ್ರಯೋಗವಾಗಿಲ್ಲ. ಹಾಗಾಗಿ ನಾವು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯುವುದರಿಂದ ಹಿಂದೂ ಧರ್ಮದ ವಿರೋಧಿಗಳಾಗುವುದಿಲ್ಲ’ ಎಂದು ಸ್ವಾಮೀಜಿ ಹೇಳಿದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವೆಂದು ಮಾನ್ಯತೆ ಸಿಗಬೇಕೆಂದು ರಾಜ್ಯ ಸರಕಾರ ಕೇಂದ್ರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದ ಶ್ರೀಗಳು, ಲಿಂಗಾಯತ ಅವೈದಿಕ ಧರ್ಮ. ಅದರ ಒಳಪಂಗಡಗಳು ಸಾಮಾಜಿಕ, ಆರ್ಥಿಕ ಅಧ್ಯಯನ ನಡೆಯಬೇಕು. ಕೇಂದ್ರ, ರಾಜ್ಯ ಸರಕಾರಗಳು ಹಿಂದುಳಿದ ಪಟ್ಟಿಗೆ ಸೇರಿಸಬೇಕು. ವೀರಶೈವ, ಲಿಂಗಾಯತ ವೇದಿಕೆ ಎಂದು ಹೋರಾಟ ಮಾಡುತ್ತಿದ್ದಾರೆ. ನಾವು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಹೋರಾಡುತ್ತಿದ್ದೇವೆ. ವೀರಶೈವ, ಲಿಂಗಾಯತ ಒಂದೇ ಅನ್ನುವುದಕ್ಕೆ ಯಾವ ದಾಖಲೆಯೂ ಇಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂದು ಸ್ಪಷ್ಟಪಡಿಸಿದರು.