ನಾಳೆ ಲೋಕಸಭಾ ಚುನಾವಣೆಯ ಮತ ಎಣಿಕೆ | ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ
ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್
PC: PTI
ಬೆಂಗಳೂರು : ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ನಡೆದಂತಹ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಮಂಗಳವಾರ(ಜೂ.4) ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದ್ದು, ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಎರಡು ಹಂತಗಳಲ್ಲಿ(ಎ.26 ಹಾಗೂ ಮೇ 7)28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಬೆಳಗ್ಗೆ ಏಕಕಾಲಕ್ಕೆ ಮತಗಳ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆದಂತೆ ಕಟ್ಟೆಚ್ಚರ ವಹಿಸಲಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಮತ ಎಣಿಕೆ ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 29 ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. 13,173 ಸಿಬ್ಬಂದಿಗಳನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದ್ದು, 3,500ಕ್ಕೂ ಹೆಚ್ಚು ಟೇಬಲ್ಗಳನ್ನು ಹಾಕಿಸಲಾಗಿದೆ.
ಮತ ಎಣಿಕಾ ಕಾರ್ಯ ನಡೆಸಲಿರುವ ಸಿಬ್ಬಂದಿಯ ಪ್ರತಿ ಟೇಬಲ್ಗೆ ಮೈಕ್ರೋ ಅಬ್ಸರ್ವರ್, ಸೂಪರ್ವೈಸರ್, ಕೌಂಟಿಂಗ್ ಅಸಿಸ್ಟೆಂಟ್ಗಳನ್ನು ನೇಮಕ ಮಾಡಲಾಗಿದೆ. ಎಣಿಕಾ ಕೇಂದ್ರದಲ್ಲಿ ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕ್ಯುಲೇಟರ್ ನಿಷೇಧಿಸಲಾಗಿದ್ದು, ಪಾಸ್ ಪಡೆದ ಏಜೆಂಟ್ಗಳು ಹಾಗೂ ಅಭ್ಯರ್ಥಿಗಳು ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮತ ಎಣಿಕೆ ನಡೆಯುವ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ. ಚುನಾವಣಾಧಿಕಾರಿ ನಿರ್ದೇಶನದ ಮೇರೆಗೆ ಇನ್ನಿತರ ಕಡೆ ಸಿಸಿ ಕ್ಯಾಮೆರಾ ಹಾಗೂ ವೀಡಿಯೋಗ್ರಾಫಿ ವ್ಯವಸ್ಥೆ, ಮತ ಎಣಿಕೆ ಕೇಂದ್ರದಲ್ಲಿ ವೀಕ್ಷಕರಿಗಾಗಿ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 1 ಗಂಟೆಯ ವರೆಗೆ ಇವಿಎಂಗಳಲ್ಲಿನ ಮತಗಳ ಎಣಿಕೆ ಕಾರ್ಯ ನಡೆಸಿದ ಬಳಿಕ, ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿರುವಂತೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಯಾವುದಾದರೂ ಐದು ಮತಗಟ್ಟೆಗಳಲ್ಲಿನ ವಿವಿಪ್ಯಾಟ್ನಲ್ಲಿರುವ ಚೀಟಿಗಳ ಎಣಿಕೆ ಕಾರ್ಯ ನಡೆಯಲಿದೆ.
ಆನಂತರ, ಅಂಚೆ ಮೂಲಕ ಬಂದಿರುವ ಮತಗಳು, 85 ವರ್ಷ ಮೇಲ್ಪಟ್ಟ ವಯೋವೃದ್ಧರು, ವಿಶೇಷ ಚೇತನರು ಮನೆಯಿಂದಲೆ ಮಾಡಿರುವ ಮತಗಳ ಎಣಿಕೆಯೂ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಸಂಜೆ 6 ಗಂಟೆಗೆ ವೇಳೆಗೆ ಸ್ಪಷ್ಟವಾದ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಾಹಿತಿ ನೀಡಿವೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತಗಳ ಎಣಿಕೆ ಕಾರ್ಯವು 22 ಸುತ್ತುಗಳು, ಬೆಳಗಾವಿ-21 ಸುತ್ತು, ಬಾಗಲಕೋಟೆ-20, ಬಿಜಾಪುರ-22, ಕಲಬುರಗಿ-21, ರಾಯಚೂರು-23, ಬೀದರ್-20, ಕೊಪ್ಪಳ-21, ಬಳ್ಳಾರಿ-19, ಹಾವೇರಿ-20, ಧಾರವಾಡ-20, ಉತ್ತರ ಕನ್ನಡ-23, ದಾವಣಗೆರೆ-19, ಶಿವಮೊಗ್ಗ-21, ಉಡುಪಿ ಚಿಕ್ಕಮಗಳೂರು-19, ಹಾಸನ-24, ದಕ್ಷಿಣ ಕನ್ನಡ-19.
ಚಿತ್ರದುರ್ಗ-22, ತುಮಕೂರು-19, ಮಂಡ್ಯ-20, ಮೈಸೂರು-25, ಚಾಮರಾಜನಗರ-21, ಬೆಂಗಳೂರು ಗ್ರಾಮಾಂತರ-22, ಬೆಂಗಳೂರು ಉತ್ತರ-34, ಬೆಂಗಳೂರು ಕೇಂದ್ರ-25, ಬೆಂಗಳೂರು ದಕ್ಷಿಣ-28, ಚಿಕ್ಕಬಳ್ಳಾಪುರ-30 ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ನಿಷೇಧಾಜ್ಞೆ: ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ರೀತಿ ಗುಂಪು ಸೇರುವುದು, ವಿಜಯೋತ್ಸವ, ಮೆರವಣಿಗೆ ಹಾಗೂ ಸಭೆ-ಸಮಾರಂಭ ಆಯೋಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಮಂಗಳವಾರ ರಾತ್ರಿ 12 ಗಂಟೆಯ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆದ ಉಪ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಯಾದಗಿರಿ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಒಟ್ಟು 23 ಸುತ್ತುಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಸಂಜೆಯ ವೇಳೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.