ಲೋಕಸಭಾ ಚುನಾವಣೆ ಹಿನ್ನಲೆ: ಪಿಎಸ್ಐ ಲಿಖಿತ ಪರೀಕ್ಷೆ ಮುಂದೂಡಿಕೆ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 8ರಂದು ನಡೆಸಲು ನಿಗದಿಯಾಗಿದ್ದ ಪಿಎಸ್‍ಐ ಲಿಖಿತ ಪರೀಕ್ಷೆಯನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಿದ್ದು, ಪರಿಷ್ಕೃತ ದಿನಾಂಕವನ್ನು ಚುನಾವಣೆ ಮುಗಿದ ಬಳಿಕ ತಿಳಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಗುರುವಾರ ಪ್ರಕಟಣೆ ಹೊರಡಿಸಿರುವ ಅವರು, ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಸಿವಿಲ್) ಹಾಗೂ ಸೇವೆಯಲ್ಲಿರುವವರು (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 402 ಖಾಲಿ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲು ಪರೀಕ್ಷಾ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ಆದರೆ ದೇಶಾದ್ಯಂತ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮೇ 8ರಂದು ನಡೆಸಲು ತೀರ್ಮಾನಿಸಲಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮುಂದಿನ ಪರೀಕ್ಷಾ ದಿನಾಂಕವನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದಿದ್ದಾರೆ.