ಲೋಕಸಭೆ ಚುನಾವಣೆ| ಗೆಲ್ಲುವ ಕ್ಷೇತ್ರಗಳಲ್ಲಿ ಸೋತರೆ ಸಚಿವರ ತಲೆದಂಡ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮುಂದಾಗಿರುವ ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಯೋಜನೆ ಹಾಕಿಕೊಂಡಿದೆ. ಆದರೆ, ಗೆಲ್ಲುವ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾದರೆ ರಾಜ್ಯದ ಸಚಿವರನ್ನು ತಲೆದಂಡ ಮಾಡುವ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ಮೂರು ದಿನಗಳಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಜ್ಯಕ್ಕೆ ಬರಬಹುದು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಥವಾ ಸಚಿವರುಗಳ ಸ್ಪರ್ಧೆ ಬಗ್ಗೆ ಮಾತಾಡಿಲ್ಲ. ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಪ್ರಚಾರ ಮಾಡಿ ಅಂತ ಹೇಳಿದ್ದಾರೆ. ಗೆಲ್ಲುವ ಕ್ಷೇತ್ರದಲ್ಲಿ ಸೋತರೆ ಸರಿಯಾಗಿ ಕೆಲಸ ಮಾಡಿಲ್ಲ ಅಂತ ತಿಳಿದುಕೊಳ್ಳಬೇಕಾಗುತ್ತದೆ ಅಂತ ಹೇಳಿದ್ದಾರೆ. ನೀವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಾಂದರೆ ಸಚಿವರಿಗೆ ಮುಂದೆ ಕಷ್ಟ ಆಗುತ್ತೆ ಅಂತ ಹೇಳಿದ್ದಾರೆ ಎಂದರು.
ಹೊಸದಿಲ್ಲಿಯಲ್ಲಿ ಸಂಯೋಜಕರ ಸಭೆಯಲ್ಲಿ ಭಾಗಿಯಾದ ವಿಚಾರವಾಗಿ ಮಾತನಾಡಿದ ಸಚಿವರು, ನಮ್ಮನ್ನೆಲ್ಲ ಎಐಸಿಸಿ ಅಧ್ಯಕ್ಷಕರು ಲೋಕಸಭಾ ಚುನಾವಣೆಗೆ ತಯಾರಿ ಸಂಬಂಧ ಚರ್ಚೆಗೆ ಕರೆಸಿದ್ದರು. ಎಲ್ಲಾ ರಾಜ್ಯದವರನ್ನು ಕರೆಸಿದ್ದರು. ದೇಶದಲ್ಲಿ ಒಟ್ಟು 5 ಕ್ಲಷ್ಟರ್ ಮಾಡಿದ್ದು, ಕರ್ನಾಟಕ ಕ್ಲಸ್ಟರ್ ಒಂದರಲ್ಲಿ ಬರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ನಾವು ಯಾವ ರೀತಿ ಬಿಎಲ್ಎ ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಆದ ಮೇಲೆ ಏನೆಲ್ಲಾ ಕ್ರಮ ತಗೆದುಕೊಳ್ಳಬೇಕು, ಪಂಚಾಯತಿ ಮಟ್ಟದಲ್ಲಿ ಹೇಗೆ ಸಮಿತಿ ಮಾಡಬೇಕು ಎಂಬ ಕುರಿತು ಚರ್ಚೆ ಆಗಿದೆ. ಹಿಂದೆ ವೀಕ್ಷಕರನ್ನು ನೇಮಿಸುತ್ತಿದ್ದರು. ಈಗ ಸಂಯೋಜಕರನ್ನು ನೇಮಿಸಿದ್ದಾರೆ. ವಾರ್ ರೂಮ್ ಅಂತ ಇರುವುದನ್ನು ಈಗ ಕನ್ವೆನ್ಷನ್ ಸೆಂಟರ್ಸ್ ಅಂತ ಮಾಡಿದ್ದಾರೆ. ಎಲ್ಲಾ ಕೋ ಆರ್ಡಿನೇಷನ್ ಮುಖ್ಯಸ್ಥರಾಗಿ ಶಶಿಕಾಂತ್ ಸೆಂಥಿಲ್ ಅವರನ್ನು ನೇಮಿಸಿದ್ದಾರೆ ಎಂದರು.
ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಗೆ ಅಭ್ಯಂತರವಿಲ್ಲ
ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ಗೆ ಬಂದರೆ ಅದಕ್ಕೆ ಅಭ್ಯಂತರ ಇಲ್ಲ. ಆದರೆ ಟಿಕೆಟ್ ವಿಚಾರದಲ್ಲಿ ಕೆಲ ಮಾನದಂಡ ಅನ್ವಯವಾಗಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.