ಲೋಕಸಭಾ ಚುನಾವಣೆ | ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಅಭ್ಯರ್ಥಿಗಳ ಹೆಸರು ಪ್ರಕಟ
ತುಮಕೂರಿನಲ್ಲಿ ಕಾಂಗ್ರೆಸ್ ಗೆ ಮರಳಿದ ಮುದ್ದಹನುಮೇಗೌಡ, ಹಾವೇರಿಗೆ ʼಅಜ್ಜಾರ ಮಗʼ ಆನಂದ ಗಡ್ಡದೇವರಮಠ
ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. 39 ಅಭ್ಯರ್ಥಿಗಳ ಪೈಕಿ, ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಮೊದಲ ಪಕ್ಷವಾಗಿದೆ.
ತುಮಕೂರಿಗೆ ಮುದ್ದಹನುಮೇಗೌಡ:
2014ರಿಂದ 2019ರ ಲೋಕಸಭಾ ಚುನಾವಣೆ ವರೆಗೂ ತುಮಕೂರು ಕ್ಷೇತ್ರದಿಂದ ಸಂಸದರಾಗಿದ್ದ ಮುದ್ದಹನುಮೇಗೌಡ ಅವರು, ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರವಿದ್ದಾಗ, ಒಪ್ಪಂದಂತೆ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕಾಗಿ ಬಂದಿತ್ತು. ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ತುಮಕೂರಿನಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿಯ ಬಸವರಾಜು ಅವರ ವಿರುದ್ಧ ಸೋತಿದ್ದರು.
ಪಕ್ಷದ ತೀರ್ಮಾನಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಆಗಿನ ತುಮಕೂರು ಸಂಸದ ಎಸ್ ಪಿ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಕುಣಿಗಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಇರಾದೆ ಅವರಿಗಿತ್ತು. ಆದರೆ ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ. ಕಳೆದ 2023ರ ವಿಧಾನಸಭಾ ಚುನಾವಣೆ ಸಮಯದಲ್ಲೇ ಕಾಂಗ್ರೆಸ್ ಗೆ ಮರಳುವ, ಕುಣಿಗಲ್ ನಿಂದ ಸ್ಪರ್ಧಿಸುವ ಯೋಜನೆಯಲ್ಲಿ ಮುದ್ದೆಹನುಮೇಗೌಡರಿದ್ದರು. ಆದರೆ ಯೋಜನೆ ತಳೆಕೆಳಕಾದಾಗ, ಲೋಕಸಭಾ ಸ್ಥಾನದ ಚಿಂತನೆಯಲ್ಲಿ ಬಿಜೆಪಿಯಲ್ಲೇ ಉಳಿದುಕೊಂಡರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳುವ ಮೂಲಕ ಮುದ್ದಹನುಮೇಗೌಡ ಅವರು ಮತ್ತೆ ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ.
ವಿಜಯಪುರದಿಂದ ಪ್ರೊ.ರಾಜು ಆಲಗೂರ :
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿ ಲೋಕಸಭಾ ಸದಸ್ಯರಾಗಿದ್ದಾರೆ.
ಉಪನ್ಯಾಸಕ ವೃತ್ತಿ ಮಾಡುತ್ತಾ, ದಲಿತ ಸಂಘರ್ಷ ಸಮಿತಿ ಮೂಲಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಪ್ರೊ.ರಾಜು ಆಲಗೂರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
1985 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಪದವಿ ಪಡೆದ ಪ್ರೊ. ರಾಜು ಆಲಗೂರ ಅವರು ಬಿಎಲ್.ಡಿ.ಇ. ಸಂಸ್ಥೆಯ ಅಥರ್ಗಾ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ಹೋರಾಟದ ಹಾದಿಯಲ್ಲೇ ಇದ್ದ ಆಲಗೂರ ಅವರು 1989 ರಲ್ಲಿ ಅವಿಭಜಿತ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಸಾರಥ್ಯ ವಹಿಸಿಕೊಂಡರು.
ಆಗ ಅಜಾತಶತ್ರು ಎಂದೇ ಹೆಸರಾಗಿದ್ದ ದಿ.ಬಿ.ಎಂ. ಪಾಟೀಲರು, ಪ್ರೊ.ಆಲಗೂರ ಅವರ ಸಂಘಟನಾ ಶಕ್ತಿ, ಜನಪರ ಕಾಳಜಿಯನ್ನು ಅಪಾರವಾಗಿ ಮೆಚ್ಚಿ ರಾಜಕೀಯ ಜೀವನಕ್ಕೆ ಪ್ರವೇಶವನ್ನು ಮಾಡುವಂತೆ ಪ್ರೋತ್ಸಾಹಿಸಿದರು. ಈ ನಡುವೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಡಾ.ಎಂ.ಬಿ. ಪಾಟೀಲ್ ಅವರು, ರಾಜು ಆಲಗೂರ ಅವರನ್ನು ರಾಜಕೀಯಕ್ಕೆ ಕರೆ ತಂದರು. ದಿ.ಬಿ.ಎಂ. ಪಾಟೀಲ್ ಹಾಗೂ ಡಾ.ಎಂ.ಬಿ. ಪಾಟೀಲ್ ಅವರನ್ನು ತಮ್ಮ ಎರಡು ಕಣ್ಣು ಹಾಗೂ ಗುರು ಎಂದು ಭಾವಿಸುವ ಪ್ರೊ.ರಾಜು ಆಲಗೂರ 1999 ರಲ್ಲಿ ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು.
ನಂತರ 2004 ರಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿ, 2014 ರಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಬೂನು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಪ್ರೊ.ರಾಜು ಆಲಗೂರ ನಾಗಠಾಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದರು. ಆದರೆ ಬದಲಾದ ಕಾಲಘಟ್ಟದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಪರಿಣಾಮವಾಗಿ ವಿಜಯಪುರ ಲೋಕಸಭಾ ಟಿಕೆಟ್ ಜೆಡಿಎಸ್ ಪಾಲಾಯಿತು.
ನಂತರ 2023 ರ ಚುನಾವಣೆಯಲ್ಲಿ ಪುನಃ ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಆದರೆ ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದ ವಿಠ್ಠಲ ಕಟಕದೊಂಡ ಅವರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಪ್ರೊ.ರಾಜು ಆಲಗೂರ ಒಪ್ಪಿಕೊಂಡರು. ಪರಿಣಾಮ ಎರಡು ಬಾರಿ ತ್ಯಾಗದ ಫಲ ಎಂಬಂತೆ ಈ ಬಾರಿ ಲೋಕಸಭೆ ಟಿಕೆಟ್ ಪ್ರೊ.ಆಲಗೂರ ಅವರಿಗೆ ದಕ್ಕಿದೆ.
ಹಾವೇರಿಗೆ ʼಅಜ್ಜಾರ ಮಗʼ ಅನಂದ ಗಡ್ಡದೇವರಮಠ :
ಆನಂದಸ್ವಾಮಿ ಗಡ್ಡದೇವರಮಠ ಮೂಲತ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ನಿವಾಸಿಯಾಗಿದ್ದಾರೆ. ವೀರಶೈವ ಲಿಂಗಾಯತ ಪಂಗಡಕ್ಕೆ ಸೇರಿದ ಆನಂದಸ್ವಾಮಿ ಅವರು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗಡ್ಡಯ್ಯ ಗಡ್ಡದೇವರಮಠ ಅವರ ಪುತ್ರ.
ಕ್ಷೇತ್ರ ಪುನರ್ ವಿಂಗಡನೆಯ ನಂತರ ಈ ಕ್ಷೇತ್ರ ಮಿಸಲು ಕ್ಷೇತ್ರವಾಗಿದ್ದರಿಂದ ರಾಜಕೀಯ ಹಿನ್ನಡೆ ಅನುಭವಿಸಿದ್ದರು. ಯುವ ನಾಯಕರಾಗಿರುವ ಅವರು ಕ್ಷೇತ್ರದಲ್ಲಿ ʼಅಜ್ಜಾರ ಮಗʼ ಎಂದೇ ಚಿರಪರಿಚಿತ. ಹಾವೇರಿ ಜಿಲ್ಲೆಯ ಶಾಸಕರೊಂದಿಗೆ ರಾಜಕೀಯ ನಂಟು ಹೊಂದಿದ್ದ ಆನಂದಸ್ವಾಮಿ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ.
ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್:
ಮೂರು ಬಾರಿ ಸಂಸದರಾಗಿರುವ ಡಿ ಕೆ ಸುರೇಶ್ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಅವರ ಸಹೋದರ. ಬೆಂಗಳೂರು ಗ್ರಾಮಾಂತರದಿಂದ ಹಾಲಿ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್.
ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ :
ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜಕುಮಾರ್ ಅವರ ಹೆಸರನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್ ಪಕ್ಷವು, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕುತೂಹಲಕಾರಿ ಕದನಕ್ಕೆ ವೇದಿಕೆ ಸಿದ್ಧಪಡಿಸಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ 2014 ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಯಡಿಯೂರಪ್ಪ ವಿರುದ್ಧ ಸೋತಿದ್ದರು. ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಈಗ ಶಿವಮೊಗ್ಗ ಲೋಕಸಭಾ ಸದಸ್ಯರು.
ನಟ ಶಿವರಾಜಕುಮಾರ್ ಅವರ ಪತ್ನಿ, ಕರ್ನಾಟಕ ಸರಕಾರದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಮತ್ತು ಕನ್ನಡದ ಮೇರುನಟ ದಿವಂಗತ ರಾಜ್‌ಕುಮಾರ್ ಅವರ ಸೊಸೆ ಗೀತಾ ಶಿವರಾಜಕುಮಾರ್ ಅವರು, ಕಳೆದ ವರ್ಷ ಎಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಹಾಸನದಿಂದ ಶ್ರೇಯಸ್ ಪಟೇಲ್:
ಶ್ರೇಯಸ್ ಪಟೇಲ್ ಹಾಸನ ಜಿಲ್ಲೆಯ ರಾಜಕಾರಣ ದಲ್ಲಿ ಅಜಾತ ಶತ್ರುವಾಗಿ ಗೋಚರಿಸುತ್ತಾರೆ. ಪಕ್ಷದ ಇತರೆ ನಾಯಕರಿಗೆ ಸ್ವಪಕ್ಷದಲ್ಲೇ ದ್ವೇಶಿಸುವರಿದ್ದಾರೆ. ಆದರೆ ಶ್ರೇಯಸ್ ಹಾಗಲ್ಲ. ಇವರ ನಡೆ – ನುಡಿ ಆಕರ್ಷಣೀಯ. ಕಳೆದ ವಿಧಾನ ಸಭಾ ಫಲಿತಾಂಶದಲ್ಲಿ ಎಚ್ ಡಿ ರೇವಣ್ಣ ಅವರಿಗೆ ನೀಡಿದ್ದ ಏಟು, ಜೆಡಿಎಸ್ ಕುಟುಂಬ ತತ್ತರಿಸುವಂತೆ ಮಾಡಿತ್ತು
ಹಾಸನದಿಂದ ಪ್ರಜ್ವಲ್ ರೇವಣ್ಣ ಲೋಕಸಭಾ ಸದಸ್ಯರಾಗಿದ್ದಾರೆ. ಮೊಮ್ಮಗನಿಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡ ಹಾಸನ ಕ್ಷೇತ್ರಬಿಟ್ಟು, ತುಮಕೂರಿಗೆ ʼರಾಜಕೀಯ ಗುಳೇʼ ಹೋಗಿದ್ದರು.
ಶ್ರೇಯಸ್ ಪಟೇಲ್ ಅವರು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಂಬಂಧಿ. ಪುಟ್ಟಸ್ವಾಮಿಗೌಡ ಅವರು 1999ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದರು. ಶ್ರೇಯಸ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಚ್ ಡಿ ರೇವಣ್ಣ ಅವರ ವಿರುದ್ಧ ಅಲ್ಪಮತಗಳ ಅಂತರದಿಂದ ಸೋತಿದ್ದರು. ರೇವಣ್ಣ ಅವರಿಗೆ 88,108 (ಶೇಕಡಾ 47.51) ಮತಗಳು ಬಂದಿದ್ದರೆ, ಶ್ರೇಯಸ್ 84,951 (ಶೇ 45.81) ಮತಗಳನ್ನು ಪಡೆದಿದ್ದರು. ಸಿಎಂ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಸಚಿವ ಕೆ.ಎನ್.ರಾಜಣ್ಣ ಅವರು ಶ್ರೇಯಸ್ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಮಂಡ್ಯಕ್ಕೆ ʼಸ್ಟಾರ್ ಚಂದ್ರುʼ:
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಉದ್ಯಮಿಯಾಗಿರುವ ವೆಂಕಟರಮಣೇಗೌಡ ಅವರು ʼಸ್ಟಾರ್ ಚಂದ್ರುʼ ಎಂದೇ ಪರಿಚಿತರು. ಇವರ ಸಹೋದರ(ಅಣ್ಣ) ಪುಟ್ಟಸ್ವಾಮಿಗೌಡ, ಹಾಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಸರಕಾರಕ್ಕೆ ಬೆಂಬಲ ನೀಡಿದ್ದಾರೆ.
ತಮ್ಮ ಒಬ್ಬ ಸೋದರ ಉದ್ಯಮಿಯಾಗಿ ಮತ್ತು ಮತ್ತೊಬ್ಬರು ಕೃಷಿಕರಾಗಿ ಯಶಸ್ಸು ಕಂಡಿದ್ದರೂ, ಅವರ ಕುಟುಂಬಕ್ಕೆ ರಾಜಕೀಯ ನಂಟು ಹೊಸದಲ್ಲ. ಹಿರಿಯ ಅಣ್ಣ ಕೆ.ಎಚ್ ಪುಟ್ಟಸ್ವಾಮಿಗೌಡರು 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು ವಿಧಾನಸಭಾಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಅವರ ಅಳಿಯ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದ ಶಾಸಕರು. ಬೀಗರಾದ ಹಿರಿಯ ರಾಜಕಾರಣಿ ಬಿ ಎನ್ ಬಚ್ಚೇಗೌಡ ಅವರು ಬಿಜೆಪಿಯಿಂದ ಸಂಸತ್ ಸದಸ್ಯರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಸಂಸತ್ ಸದಸ್ಯರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ, ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.