ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಇಂದು 69 ನಾಮಪತ್ರ ಸಲ್ಲಿಕೆ
Image credit: X/@JoshiPralhad
ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಎರಡನೆ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲು ಸೋಮವಾರ 10 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 69 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 4, ಬೆಳಗಾವಿ-7, ಬಾಗಲಕೋಟೆ-3, ಬಿಜಾಪುರ-3, ಗುಲ್ಬರ್ಗ-5, ರಾಯಚೂರು-2, ಬೀದರ್-3, ಕೊಪ್ಪಳ-3, ಬಳ್ಳಾರಿ-1, ಹಾವೇರಿ-9, ಧಾರವಾಡ-11, ಉತ್ತರ ಕನ್ನಡ-3, ದಾವಣಗೆರೆ-9 ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿವೆ.
ಅಬಕಾರಿ ಇಲಾಖೆಯವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಸವನಗುಡಿ ಯಲ್ಲಿರುವ ಜೆ.ಪಿ.ನಗರ ಇನ್ಸ್ಟಿಟ್ಯೂಟ್ ಕ್ಲಬ್ನಲ್ಲಿ 35.24 ಲಕ್ಷ ರೂ.ಮೌಲ್ಯದ 4978.485 ಲೀಟರ್ ಮದ್ಯ, ಬನಶಂಕರಿ ಎರಡನೆ ಹಂತದಲ್ಲಿರುವ ಬೆಂಗಳೂರು ವಿಹಾರ ಕೇಂದ್ರದಲ್ಲಿ 77.84 ಲಕ್ಷ ರೂ.ಮೌಲ್ಯದ 4371.970 ಲೀಟರ್ ಮದ್ಯ ಹಾಗೂ ಆದಾಯ ತೆರಿಗೆ ಇಲಾಖೆಯವರು 20 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,751 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 2,280 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 2,943 ಪ್ರಕರಣ ದಾಖಲಿಸಿದೆ. ಎನ್ಡಿಪಿಎಸ್ ಅಡಿಯಲ್ಲಿ 133 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 16,040 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,388 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಯಿಂದ ಮತದಾನ ಮಾಡಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿರುವ 48,609 ಮತದಾರರ ಪೈಕಿ 85 ವರ್ಷಕ್ಕಿಂತ ಮೇಲ್ಪಟ್ಟ 20,449 ಹಾಗೂ ಶೇ.40ಕ್ಕಿಂತ ಹೆಚ್ಚಿನ ದಿವ್ಯಾಂಗರಾಗಿರುವ 6,723 ಮತದಾರರು ಈವರೆಗೆ ಮತದಾನ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.