ಲೋಕಸಭಾ ಚುನಾವಣೆ: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ
ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲನೇ ಹಂತದ ಮತದಾನ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಮತದಾನವಾಗಿದ್ದು, ಮತದಾರರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೆಳಿಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.
ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಯನಗರದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನಲ್ಲಿ ಸ್ಥಾಪನೆಯಾದ ಮೂರು ಮತಗಟ್ಟೆಗಳಲ್ಲಿ ಒಂದು "ಸಖಿ" ಮತಗಟ್ಟೆಯೂ ಸಹ ಸ್ಥಾಪನೆಯಾಗಿತ್ತು.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಶಿವಾಜಿ ನಗರದ ಮತಗಟ್ಟೆ 52 ರಲ್ಲಿ ಮತ ಚಲಾಯಿಸಿದರು.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಇಂದು ಬೆಂಗಳೂರಿನ ಉತ್ತರ ಲೋಕಸಭಾ ವ್ಯಾಪ್ತಿಯ ಜಕ್ಕೂರಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ: 141 ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದು ಜೆ.ಪಿ .ನಗರದ ಮತಗಟ್ಟೆಯಲ್ಲಿ ತಮ್ಮ ಪತ್ನಿಯ ಸಮೇತ ಮತ ಚಲಾಯಿಸಿದರು.