ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ರನ್ನು ಪದಚ್ಯುತಿಗೊಳಿಸುವಂತೆ ಸ್ಪೀಕರ್ ಯು.ಟಿ. ಖಾದರ್ ಗೆ 'ನೈಜ ಹೋರಾಟಗಾರರ ವೇದಿಕೆ' ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಪದಚ್ಯುತಿಗೊಳಿಸಬೇಕು ಎಂದು 'ನೈಜ ಹೋರಾಟಗಾರರ ವೇದಿಕೆ' ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಕೆ ಮಾಡಿದೆ.
ಸೋಮವಾರ 'ನೈಜ ಹೋರಾಟಗಾರರ ವೇದಿಕೆ'ಯ ಎಚ್.ಎಂ ವೆಂಕಟೇಶ್ ಅವರ ನೇತೃತದ್ವದ ನಿಯೋಗವು, ಸ್ಪೀಕರ್ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.
''ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮತ್ತು ಅವರ ಕುಟುಂಬದ ಮೇಲೆ ಗಂಭೀರವಾದ ಆರೋಪ, ಆಪಾದನೆಗಳಿದ್ದರೂ ಸಹಿತ ಅವರ ಮೇಲೆ ಎಫ್ಐಆರ್ ಮಾಡದಂತೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ'' ಎಂದು 'ನೈಜ ಹೋರಾಟಗಾರರ ವೇದಿಕೆ' ಆರೋಪಿಸಿದೆ.
''ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿ, ಅವರನ್ನು ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಬೇಕು'' ಎಂದು ಯು.ಟಿ. ಖಾದರ್ ಅವರನ್ನು 'ನೈಜ ಹೋರಾಟಗಾರರ ವೇದಿಕೆ' ಒತ್ತಾಯಿಸಿದೆ.