ಬಿಬಿಎಂಪಿಯ 45 ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರ ದಾಳಿ, ಪರಿಶೀಲನೆ
ಬೆಂಗಳೂರು, ಆ.3: ಬಿಬಿಎಂಪಿಯ ಕಂದಾಯ ಹಾಗೂ ನಗರ ಯೋಜನಾ ವಿಭಾಗಗಳಲ್ಲಿ ಭ್ರಷ್ಟಾಚಾರ ದೂರುಗಳು ಕೇಳಿಬಂದ ಬೆನ್ನಲ್ಲೇ ಬೆಂಗಳೂರಿನ 45 ಕಡೆಗಳಲ್ಲಿ ಲೋಕಾಯುಕ್ತ ದಳದ ಪೆÇಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ತಂಡ ಬಿಬಿಎಂಪಿಯ ಎಲ್ಲಾ ವಲಯಗಳ ಆರ್‍ಓ, ಎಆರ್‍ಓ, ಎಡಿಟಿಪಿ ಕಚೇರಿಗಳು ಸೇರಿದಂತೆ 45 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದರು.
ಈ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ಅಧಿಕಾರಿವೊಬ್ಬರು, ಕಡತ ವಿಲೇವಾರಿಗೆ ವಿಳಂಬ, ಖಾತಾ ಬದಲಾವಣೆ ಹಾಗೂ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ಪಡೆಯಲು ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್‍ಓ, ಎಆರ್‍ಓ, ಎಡಿಟಿಪಿ ಕಚೇರಿಗಳು, ರೆವಿನ್ಯೂ ಮತ್ತು ನಗರ ಯೋಜನಾ ಕಚೇರಿಗಳ ಮೇಲೆ ದಾಳಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದರು.
ಖುದ್ದು ಅಖಾಡಕ್ಕಿಳಿದ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್..!
ಸ್ವತಃ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ರಾಜಾಜಿನಗರದ ಕಂದಾಯ ಕಚೇರಿಯಲ್ಲಿ ಅಧಿಕಾರಿ ಎಚ್ ಭಾರತಿ ಅವರಿಗೆ ಪ್ರಶ್ನೆಗಳ ಸುರಿಮಳೆಯೇ ಗೈದಿದರು.ಅರ್ಜಿದಾರರಿಗೆ ಕರೆ ಮಾಡಿ ತಾವು ಸಲ್ಲಿಸಿರುವ ಅರ್ಜಿಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿದ್ದಾರಾ? ಎಂದು ಕೇಳಿದರು. ಈ ವೇಳೆ ಯಾವುದೇ ದಾಖಲೆ ಒದಗಿಸದಿದ್ದಕ್ಕೆ ಲೋಕಾಯುಕ್ತರು ಗರಂ ಆಗಿ ಕ್ಯಾಶ್ ಡಿಕ್ಲರೇಷನ್ ಬುಕ್ ಬಗ್ಗೆ ಕೇಳಿದ ಭಾರತಿ ಕಕ್ಕಾಬಿಕ್ಕಿದರು ಎಂದು ತಿಳಿದುಬಂದಿದೆ.
ಎಂಜಿ ರಸ್ತೆ ಯುಟಿಲಿಟಿ ಬಿಲ್ಡಿಂಗ್‍ಗೆ ಎಸ್ಪಿ ಭೇಟಿ
ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಎಂಜಿ ರೋಡ್‍ನಲ್ಲಿರುವ ಯುಟಿಲಿಟಿ ಬಿಲ್ಡಿಂಗ್‍ಗೆ ಲೋಕಾಯುಕ್ತ ಎಸ್ಪಿ ಅಶೋಕ್ ಭೇಟಿ ನೀಡಿ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಪ್ರಶ್ನೆ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು.