ರಾಜ್ಯದ ವಿವಿಧ ಆರ್‌ಟಿಒ ಚೆಕ್ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ : ನಗದು ವಶಕ್ಕೆ, ದಾಖಲೆ ಪರಿಶೀಲನೆ
ಬೆಂಗಳೂರು : ರಾಜ್ಯದ ಹೆದ್ದಾರಿಗಳಲ್ಲಿನ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ಸವಾರರಿಂದ ಹಣ ವಸೂಲಿ ಆರೋಪದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬೀದರ್, ಕೋಲಾರ, ಬಳ್ಳಾರಿ, ಚಿಕ್ಕೋಡಿ ಹಾಗೂ ವಿಜಯಪುರ, ಬೆಳಗಾವಿ ಆರ್‌ಟಿಓ ಚೆಕ್ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದು, ಹಲವೆಡೆ ನಗದು ವಶಪಡಿಸಿಕೊಂಡಿವುದಾಗಿ ವರದಿಯಾಗಿದೆ.
ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀದರ್‌ನ ಮೊಳಕೇರಾ ಬಳಿ ಇರುವ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಇನ್ನು ಬಳ್ಳಾರಿ ತಾಲೂಕಿನ ಪಿ.ಡಿ.ಹಳ್ಳಿ ಆರ್‌ಟಿಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಡಿವೈಎಸ್ಪಿ ವಸಂತಕುಮಾರ್, ರಫೀಕ್, ಸಂಗಮೇಶ್ ಸೇರಿದಂತೆ ಇತರ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿದ್ದ ಹೆಚ್ಚುವರಿ ಹಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ನೇತೃತ್ವದ ಲೋಕಾಯುಕ್ತ ಸಿಬ್ಬಂದಿ ತಂಡ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ಬಳಿಯ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿದೆ. ಸುಮಾರು ಆರು ಜನ ಅಧಿಕಾರಿಗಳ ತಂಡ ಸ್ಥಳದಲ್ಲಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿರುವುದಾಗಿ ಲೋಕಾಯುಕ್ತ ಮೂಲಗಳು ತಿಳಿಸಿವೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್ ಬಳಿ ಇರುವ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಧನಂಜಯ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೆ, ಮುಳಬಾಗಿಲು ತಾಲೂಕಿನ ನಂಗಲಿ ಚೆಕ್ ಪೋಸ್ಟ್ ಮೇಲೂ ದಾಳಿ ನಡೆದಿದೆ. ಈ ಎರಡು ಚೆಕ್ ಪೋಸ್ಟ್ ಗಳಲ್ಲಿ ದಾಖಲೆಗಿಂತ ಅಧಿಕ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ್ ಬಳಿ ಇರುವ ಆರ್‌ಟಿಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಮಲ್ಲೇಶ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇನ್ನೂ ಕೆಲವೆಡೆ ಲೋಕಾಯುಕ್ತ ಅಧಿಕಾರ ತಂಡ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು ಹಲವು ಅವ್ಯವಹಾರಗಳನ್ನು ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ.