ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಜಾತ್ರೆ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಐದು ಗ್ಯಾರಂಟಿಗಳ ಪ್ರಚಾರ ಮತ್ತು ಸಮೀಕ್ಷೆಗಾಗಿ ಕಾಂಗ್ರೆಸ್ ಸರಕಾರ ಜನರ ತೆರಿಗೆ ಹಣವನ್ನು ಮನಸೋ ಇಚ್ಛೆ ಪೋಲು ಮಾಡುತ್ತಿದ್ದು, ಇಲ್ಲಿ ಲೂಟಿ ಜಾತ್ರೆ ನಡೆಯುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಾ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ಯಾರಂಟಿಗಳ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ಸುರಿಯುತ್ತಿರುವ ಸರಕಾರವು, ಬೇಕು ಬೇಕಾದವರಿಗೆ, ಶಾಸಕರ ಕುಟುಂಬಕ್ಕೆ ಸಮೀಕ್ಷೆಯ ಹೆಸರಿನಲ್ಲಿ ಹಣ ಕೊಟ್ಟಿದೆ ಎಂದು ದೂರಿದರು.
ಸರಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷ ಕಡತಗಳು ಕೊಳೆಯುತ್ತಾ ಬಿದ್ದಿವೆ. ‘ದ ಪಾಲಿಸಿ ಫ್ರಂಟ್’ ಸಲ್ಲಿಸಿದ ಪ್ರಸ್ತಾವನೆಗೆ ಒಂದೇ ದಿನದಲ್ಲಿ ಚಿರತೆ ವೇಗದಲ್ಲಿ ಒಪ್ಪಿಗೆ ನೀಡಲಾಗಿದೆ. ಇನ್ನೊಂದು ಸಂಸ್ಥೆಗೆ ಒಂದು ಕೋಟಿ ರೂಪಾಯಿ ಕೊಡಲಾಗಿದೆ. ಎಂ2ಎಂ ಎನ್ನುವ ಕಂಪೆನಿ ಅದಾಗಿದ್ದು, ಅದೂ ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ಮಾಡುತ್ತಿದೆ. ಮಂಡ್ಯ ಜಿಲ್ಲೆಯ ಶಾಸಕರೊಬ್ಬರ ಪತ್ನಿ ನಿರ್ದೇಶಕಿ ಆಗಿರುವ ಕಂಪೆನಿಗೆ ಕೂಡ ಗ್ಯಾರಂಟಿಗಳ ಪ್ರಚಾರಕ್ಕಾಗಿ ಕೋಟಿ ರೂಪಾಯಿ ನೀಡಲಾಗಿದೆ ಎಂದು ಆರೋಪ ಮಾಡಿದರು.
ಗ್ಯಾರಂಟಿಗಳ ಹೆಸರಿನಲ್ಲಿ ಹೀಗೆ ಹಣವನ್ನು ಇಷ್ಟ ಬಂದ ಹಾಗೆ ಪೋಲು ಮಾಡಲಾಗುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿಜಾತ್ರೆ ನಡೆಯುತ್ತಿದೆ ಎಂದ ಅವರು, ಪ್ರಚಾರಕ್ಕಾಗಿಯೇ ಈವರೆಗೂ 140 ಕೋಟಿ ರೂ.ಗಳನ್ನು ರಾಜ್ಯ ಸರಕಾರ ವೆಚ್ಚ ಮಾಡಿದೆ. ಬೆಳಗ್ಗೆ ಯಾವ ಟೀವಿ ನೋಡಿದರೂ, ಯಾವ ದಿನಪತ್ರಿಕೆ ನೋಡಿದರೂ ಸರಕಾರದ್ದು ದರ್ಶನ ಆಗುತ್ತಿದೆ. ಎದ್ದ ಕೂಡಲೇ ದೇವರ ದರ್ಶನದ ಬದಲು ನಿಮ್ಮದೇ ದರ್ಶನ ಆಗುತ್ತಿದೆ ಎಂದು ಸರಕಾರದ ವಿರುದ್ಧ ಅವರು ಪ್ರಹಾರ ನಡೆಸಿದರು.