ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವ ಮೂಲಕ ಮಾಧವಿ ಬುಚ್ ಸೆಬಿಯ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ: ದಿನೇಶ್ ಗುಂಡೂರಾವ್
ಬೆಂಗಳೂರು: ಅದಾನಿ ಸಮೂಹದ ಶೆಲ್ ಕಂಪನಿಗಳಲ್ಲಿ ಸೆಬಿ ಅಧ್ಯಕ್ಷೆ ಹೂಡಿಕೆ ಮಾಡಿರುವುದಾಗಿ ಹಿಂಡನ್ಬರ್ಗ್ ವರದಿ ನೀಡಿದೆ. ಇದು ಭಾರತದ ಷೇರುಪೇಟೆಯೇ ಅಲ್ಲೋಲ ಕಲ್ಲೋಲವಾಗುವ ವಿಚಾರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅದಾನಿ ಸಮೂಹದ ವಿರುದ್ಧ ಸೆಬಿ ತನಿಖೆ ನಡೆಸುತ್ತಿದೆ. ಆದರೆ ಇಲ್ಲಿಯವರೆಗೂ ಅದಾನಿ ಸಮೂಹದ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಅದಾನಿ ಸಮೂಹದ ವಿರುದ್ಧ ಕ್ರಮಕ್ಕೆ ಸೆಬಿ ಯಾಕೆ ಹಿಂದೇಟು ಹಾಕುತ್ತಿದೆ ಎಂಬುದು ಚಿದಂಬರ ರಹಸ್ಯದಂತೆ ಕಾಡುತಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೆಬಿಯ ಅಧ್ಯಕ್ಷರೇ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವಾಗ ಕ್ರಮ ತೆಗೆದುಕೊಳ್ಳಲು ಹೇಗೆ ಸಾಧ್ಯ.? ಎಂದು ಕುಟುಕಿದ್ದಾರೆ.
ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಶಾಸನಬದ್ಧ ಸಂಸ್ಥೆಯಾದ ಸೆಬಿಯ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿಯವರ ಹಣಕಾಸು ಹಗರಣದ ಬಗ್ಗೆ ಹಿಂಡನ್ ಬರ್ಗ್ ಸಾಕ್ಷಿ ಸಮೇತ ವರದಿ ನೀಡುತ್ತಿದೆ. ಆದರೆ ಈ ಬಗ್ಗೆ ತನಿಖೆ ಮಾಡಬೇಕಾದ ಸಂಸ್ಥೆಯ ಅಧ್ಯಕ್ಷರೇ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುತ್ತಾರೆ. ಇಂತಹ ಸೋಜಿಗಗಳು ಮೋದಿಯವರ ಆಡಳಿತದಲ್ಲಿ ನಡೆಯಲು ಮಾತ್ರ ಸಾಧ್ಯ. ಅದಾನಿ ಸಮೂಹದ ಹಗರಣದ ಬಗ್ಗೆ, ಸೆಬಿ ಅಧ್ಯಕ್ಷರ ಪಾತ್ರದ ಬಗ್ಗೆ ಪ್ರಧಾನಿಯವರು ಏನಾದರೂ ಹೇಳಲಿದ್ದಾರೆಯೇ.? ಎಂದು ಪ್ರಶ್ನಿಸಿದ್ದಾರೆ.
ಅದಾನಿ ಸಮೂಹದ ಶೆಲ್ ಕಂಪನಿಗಳಲ್ಲಿ ಸೆಬಿ ಅಧ್ಯಕ್ಷೆ ಹೂಡಿಕೆ ಮಾಡಿರುವುದು ಅತ್ಯಂತ ಗಂಭೀರವಾದ ವಿಚಾರ. ಜೊತೆಗೆ ಕೋಟ್ಯಂತರ ಹೂಡಿಕೆದಾರರು ಸೆಬಿ ಮೇಲಿಟ್ಟಿರುವ ವಿಶ್ವಾಸಕ್ಕೂ ಧಕ್ಕೆ ತಂದ ಸಂಗತಿ. ಹಾಗಾಗಿ ಈ ಹಗರಣದ ವಿಸ್ತೃತ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಲಿ. ಜೊತೆಗೆ ಸೆಬಿ ಅಧ್ಯಕ್ಷರ ಹೂಡಿಕೆ ವಿಚಾರ ಜಂಟಿ ಸದನ ಸಮಿತಿಯಿಂದ ತನಿಖೆಗೊಳಪಡಲಿ. ಆಗ ಸತ್ಯ ಹೊರಬೀಳಲಿದೆ ಎಂದು ಸಚಿವ ದಿನೇಶ್ ಗುಡೂರಾವ್ ಹೇಳಿದ್ದಾರೆ.