ಎಸ್ಸೆಸೆಲ್ಸಿ ಪರೀಕ್ಷೆ | ಯಾವುದೇ ಕಾರಣಕ್ಕೂ ಗ್ರೇಸ್ ಮಾರ್ಕ್ಸ್ ನೀಡುವುದಿಲ್ಲ : ಸಚಿವ ಮಧು ಬಂಗಾರಪ್ಪ

ಮಧು ಬಂಗಾರಪ್ಪ
ಬೆಂಗಳೂರು : ಎಸ್ಸೆಸೆಲ್ಸಿ ಪರೀಕ್ಷೆಯು ಮಾ.21ರಿಂದ ಆರಂಭವಾಗುತ್ತಿದ್ದು, ಈ ಬಾರಿಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಕಾರಣಕ್ಕೂ ಕೃಪಾಂಕ(ಗ್ರೇಸ್ ಮಾರ್ಕ್ಸ್) ನೀಡುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕೊಟ್ಟಿದ್ದ ಶೇ.10 ಕೃಪಾಂಕದ ಬಗ್ಗೆ ಪರಿಶೀಲನೆ ಮಾಡಲಾಗುವುದು. ಆದರೆ ಹಿಂದಿನ ಬಾರಿ ವೆಬ್ಕಾಸ್ಟಿಂಗ್ ಹಿನ್ನೆಲೆಯಲ್ಲಿ ಕೊಟ್ಟಿದ್ದ ಶೇ.10ರಷ್ಟು ಕೃಪಾಂಕವನ್ನು ಈ ಬಾರಿ ಕೊಡುವುದಿಲ್ಲ ಎಂದರು.
ಹಿಂದಿನ ವರ್ಷ ವೆಬ್ಕಾಸ್ಟ್ ಮಾಡುವುದರಿಂದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ವೃದ್ಧಿಗೆ ಏನು ಮಾಡಬೇಕು ಎಂದು ಈಗ ಚರ್ಚೆ ಮಾಡಿದ್ದೇವೆ. ಮೂರು ಬಾರಿಯ ಪರೀಕ್ಷಾ ಪದ್ಧತಿ ಈಗ ಮಕ್ಕಳಿಗೆ ಅರ್ಥವಾಗಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಮತ್ತೆ ಶಾಲೆಗೆ ಸೇರುವ ವ್ಯವಸ್ಥೆಯೂ ಈಗ ಮಕ್ಕಳಿಗೆ ಅರ್ಥವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಿದೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನಾವು ಮಾರ್ಗೋಪಾಯಗಳನ್ನು ಸಿದ್ಧ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಎಸ್ಸೆಸೆಲ್ಸಿ ಫಲಿತಾಂಶ ವೃದ್ಧಿಗೆ ವಿಶೇಷ ತರಗತಿಗಳನ್ನು ಮಾಡುವ ಮೂಲಕ ಅಭ್ಯಾಸ ಮಾಡುವ ಕಾರ್ಯಕ್ರಮ ಮಾಡಿದ್ದೇವೆ. ಶಿಕ್ಷಕರು ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು ಮಾಡುವ ಕೆಲಸ ಮಾಡಿದ್ದಾರೆ. ಸಿಇಒಗಳೇ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿ ಪರೀಕ್ಷೆ ಮಾಡಿದ್ದಾರೆ. 2-3 ಶಾಲೆಗಳಿಗೆ ಒಬ್ಬ ಅಧಿಕಾರಿಗಳ ನೇತೃತ್ವಗಳನ್ನು ನೇಮಕ ಮಾಡಿ ಕಲಿಕೆ ಅಭಿವೃದ್ಧಿ ಮಾಡುವ ಕೆಲಸ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಅನೇಕ ಕಾರ್ಯಕ್ರಮ ರೂಪಿಸಿದ್ದು, ಒಂದು ದಿನಕ್ಕೆ ಒಂದು ಅಂಕ ಎಂಬ ಕಾರ್ಯಕ್ರಮವೂ ಒಂದಾಗಿದೆ. ಮಕ್ಕಳಿಗೆ ಬೆಳಗ್ಗೆ ಫೋನ್ ಮಾಡಿ ಎಬ್ಬಿಸಿ ಓದಿಸುವ ಕಾರ್ಯಕ್ರಮ ಇದಾಗಿದೆ. ಮಕ್ಕಳು ಸ್ಮಾರ್ಟ್ ಕ್ಲಾಸ್ ಬೇಕು, ಇಂಟರ್ನೆಟ್ ವ್ಯವಸ್ಥೆ ಬೇಕು ಎಂದು ಕೇಳಿದ್ದಾರೆ. ಇದರ ವ್ಯವಸ್ಥೆ ಶಿಕ್ಷಣ ಇಲಾಖೆ ಮಾಡಲಿದೆ. ಸ್ಕಿಲ್ ವಿಷಯಗಳನ್ನು ಕಲಿಸುವ ಕಾರ್ಯಕ್ರಮ ಶೀಘ್ರವೇ ಪ್ರಾರಂಭ ಮಾಡಲಿದ್ದೇವೆ ಎಂದು ಎನ್. ಮಧು ಬಂಗಾರಪ್ಪ ಹೇಳಿದರು.
ಅನಧಿಕೃತ ಶಾಲೆಗಳ ಪಟ್ಟಿ ಮಾಡಲಾಗುತ್ತಿದೆ. ಶಾಲೆ ಮಾನ್ಯತೆ ನವೀಕರಣ ವಿಚಾರದಲ್ಲಿ ನಿಯಮಗಳ ಸಡಿಲದ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ನವೀಕರಣ, ಅಗ್ನಿಶಾಮಕ ಸೇರಿ ಇರುವ ಗೊಂದಲ ನಿವಾರಣೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇನ್ನು ಪರೀಕ್ಷೆಗೆ ಹಿಜಬ್ ಅನುಮತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯ ಇನ್ನೂ ಕೋರ್ಟ್ನಲ್ಲಿದೆ. ಈ ಬಗ್ಗೆ ಈಗ ಮಾತನಾಡುವುದಿಲ್ಲ. ಅನುಮತಿ ಕೊಡುವ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದರು.