ಮಡಿಕೇರಿ: ಮದುವೆ ನಾಟಕವಾಡಿ ನಿವೃತ್ತ ಯೋಧನಿಗೆ ವಂಚನೆ ಆರೋಪ; ಇಬ್ಬರ ಬಂಧನ
ನಿವೃತ್ತ ಯೋಧ | ಬಂಧಿತ ಆರೋಪಿಗಳು
ಮಡಿಕೇರಿ ಡಿ.10 : ಅವಿವಾಹಿತ ನಿವೃತ್ತ ಯೋಧರೊಬ್ಬರಿಗೆ ಮದುವೆಯ ಆಸೆ ತೋರಿಸಿ, ಬೆದರಿಕೆಯೊಡ್ಡಿ ನಗದು ಮತ್ತು ಚೆಕ್ ಅನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾದ ನಿವೃತ್ತ ಯೋಧನನ್ನು ಕೇರಳದ ಎರ್ನಾಕುಲಂ ಜಿಲ್ಲೆಯ ನಿವಾಸಿ ಜಾನ್ ಮ್ಯಾಥ್ಯು(64) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಿವಾಸಿ ಅಬ್ದುಲ್ ಬಶೀರ್ (29) ಕಡಬ ನಿವಾಸಿ ಸಾದಿಕ್ (30) ಎಂಬವರನ್ನು ಕೊಡಗು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಫೈಝಲ್ ಈಗಾಗಲೇ ಮೈಸೂರು ನಗರದಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ ಬಂಧಿಯಾಗಿ ಪೊಲೀಸರ ವಶದಲ್ಲಿದ್ದಾನೆ. ತಲೆ ಮರೆಸಿಕೊಂಡಿರುವ ಆರೋಪಿ ಅಮೀರ್ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ 3 ಮೊಬೈಲ್ಗಳು, ರೂ.1,05,000 ನಗದು ಮತ್ತು ರೂ. 2,10,000 ಮೌಲ್ಯದ ಚೆಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮದುವೆ ನಾಟಕ
ಅವಿವಾಹಿತರಾಗಿದ್ದ ನಿವೃತ್ತ ಯೋಧ ಜಾನ್ ಮ್ಯಾಥ್ಯು ಅವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಫೈಝಲ್ ಮ್ಯಾಥ್ಯು ಅವರನ್ನು ಮದುವೆಯಾದರೆ ಸಂತೋಷದಿಂದ ಜೀವನ ಸಾಗಿಸಬಹುದು ಎಂದು ಪುಸಲಾಯಿಸಿ ಮದುವೆಯಾಗುವಂತೆ ಹುರಿದುಂಬಿಸಿದ್ದಾನೆ ಎನ್ನಲಾಗಿದೆ.
ಫೈಝಲ್, ತನ್ನ ಪರಿಚಯದ ಹುಡುಗಿಯನ್ನು ಮದುವೆ ಮಾಡಿಕೊಡುವುದಾಗಿ ನಂಬಿಸಿ 2023 ನ.26 ರಂದು ಜಾನ್ ಮ್ಯಾಥ್ಯು ಅವರನ್ನು ಮಡಿಕೇರಿ ನಗರದ ಹೋಂಸ್ಟೇಯೊಂದಕ್ಕೆ ಕರೆಸಿದ್ದಾನೆ. ಅಲ್ಲಿ ಅಬ್ದುಲ್ ಬಶೀರ್, ಸಾದಿಕ್ ಹಾಗೂ ಅಮೀರ್ ಎಂಬವರು ಸೇರಿ ಮಹಿಳೆಯೊಬ್ಬರನ್ನು ತೋರಿಸಿ ಮದುವೆ ಮಾಡಿಸಿ ಅಲ್ಲೇ ತಂಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅದೇ ದಿನ ಸಂಜೆ ನಾಲ್ವರು ಆರೋಪಿಗಳು ಮದುವೆಯ ಫೋಟೋಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವುದಾಗಿ ಜಾನ್ ಮ್ಯಾಥ್ಯು ಅವರಿಗೆ ಬ್ಲಾಕ್ಮೇಲ್ ಮಾಡಿ 10 ಲಕ್ಷ ರೂ. ನಗದು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಜಾನ್ ಮ್ಯಾಥ್ಯು ಅವರು ಆರೋಪಿಗಳಿಗೆ 8ಲಕ್ಷ ರೂ. ನಗದು ಹಾಗೂ ಉಳಿದ ಮೊತ್ತಕ್ಕೆ ಚೆಕ್ ನೀಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ತಾನು ವಂಚನೆಗೊಳಗಾಗಿರುವುದನ್ನು ಮನಗಂಡ ಜಾನ್ ಮ್ಯಾಥ್ಯು ಅವರು ಪ್ರಕರಣ ದಾಖಲಿಸಿದ್ದಾರೆ.
ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಜಗದೀಶ್ ಎಂ, ಸಿಪಿಐ ಅನೂಪ್ ಮಾದಪ್ಪ, ಡಿಸಿಆರ್ಬಿ ಪಿಐ ಐ.ಪಿ.ಮೇದಪ್ಪ, ಮಡಿಕೇರಿ ನಗರ ಪಿಎಸ್ಐ ಲೋಕೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಅಮೀರ್ ನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.