ಮಹಾದಾಯಿ ಯೋಜನೆ | ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ : ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು: ಮಹಾದಾಯಿ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಮಾಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ರಾಜ್ಯದ ವಿದ್ಯುತ್ ಯೋಜನೆಗೆ 435 ಎಕರೆ ಅರಣ್ಯ ಭೂಮಿ ಬಳಕೆಯಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಭೂಮಿಯೂ ಒಳಗೊಳ್ಳಲಿದೆ. ಈ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ಕೊಟ್ಟಿದೆ. ಆದರೆ, ನಮ್ಮ ರಾಜ್ಯದ ವ್ಯಾಪ್ತಿಯಲ್ಲಿನ ಮಹಾದಾಯಿ ಯೋಜನೆಗೆ ಅನುಮತಿ ನೀಡದೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ಗೋವಾ-ತಮ್ನೂರ್ 400 ಕೆವಿ ವಿದ್ಯುತ್ ಪೂರೈಕೆ ಯೋಜನೆಗೆ ಅನುಮತಿ ಕೊಟ್ಟಿದೆ. ಆದರೆ, ಮಹಾದಾಯಿ ಯೋಜನೆಗೆ ಅನುಮತಿ ನೀಡದಿರುವ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರವಾಗಿ ಚರ್ಚೆ ಮಾಡಿ, ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸದ್ಯದಲ್ಲೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಲಾಗುವುದು. ನಂತರ, ಪ್ರಧಾನಿ ಬಳಿ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿ ಒತ್ತಾಯ ಮಾಡುವುದು ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.