ಮೆಕ್ಕೆಜೋಳ ಸಂಸ್ಕರಣಾ ಘಟಕ ದುರಂತ; ಮೃತ ಕಾರ್ಮಿಕರಿಗೆ ಎರಡು ಲಕ್ಷ ಪರಿಹಾರ: ಸಚಿವ ಎಂಬಿ ಪಾಟೀಲ್ ಘೋಷಣೆ
ವಿಜಯಪುರ: ನಗರದ ಕೈಗಾರಿಕಾ ಪ್ರದೇಶದ 'ರಾಜ್ ಗುರು ಫುಡ್' ಗೋದಾಮಿನ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಏಳು ಕಾರ್ಮಿಕರ ಕುಟುಂಬಕ್ಕೆ ಎರಡು ಲಕ್ಷ. ರೂ ಪರಿಹಾರ ನೀಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಘೋಷಣೆ ಮಾಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಗುರು ಗೋದಾಮಿನಲ್ಲಿ ನಡೆದ ಅವಘಡದಲ್ಲಿ ಸುಮಾರು ಎಂಟು ಜನ ಕಾರ್ಮಿಕರು ಸಿಲುಕಿಕೊಂಡಿದ್ದರು ಅದರಲ್ಲಿ ಓರ್ವ ಮಾತ್ರ ಬದುಕುಳಿದಿದ್ದು ಏಳು ಜನ ಸಾವನ್ನಪ್ಪಿದ್ದಾರೆ ಎಂದರು.
"ಬಿಹಾರದಿಂದ ತಮ್ಮ ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದರು. ಅವರು ವಯಸ್ಸುಗಳನ್ನು ಗಮಿನಿಸಿದಾಗ ಮಧ್ಯ ವಯಸ್ಸಿನವರು ಮತ್ತು ಯುವಕರೇ ಇದ್ದಾರೆ. ಈಗಾಗಲೇ ಎಫ್.ಐ.ಆರ್ ದಾಖಲಿಸಲಾಗಿದೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಿನ ಮೂಲಕ ಶಿಕ್ಷೆಗೊಳಪಡಿಸಲಾಗುವುದು" ಎಂದರು.
ಎಲ್ಲ ಮೃತ ದೇಹಗಳನ್ನು ಏಕ ಕಾಲದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅವರ ರಾಜ್ಯಕ್ಕೆ ಕಳುಹಿಸಬೇಕು ಎನ್ನುವ ಬೇಡಿಕೆ ಮೃತರ ಕುಟುಂಬದವರಿಂದ ಇತ್ತು. ಈ ಹಿನ್ನಲೆಯಲ್ಲಿ ಎಲ್ಲ ಮೃತ ದೇಹಗಳನ್ನು ಸರ್ಕಾರದಿಂದಲೇ ಏಕ ಕಾಲಕ್ಕೆ ವಿಜಯಪುರದ ಹತ್ತಿರ ಇರುವ ವಿಮಾನ ನಿಲ್ದಾಣದ ಮೂಲಕ ಬೀಹಾರ ರಾಜ್ಯದ ಪಟ್ನಾಗೆ ಕಳುಹಿಸಿ ಅಲ್ಲಿಂದ ಅವರವರ ಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು.
ಇನ್ನು ಈ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ರಾಜ್ ಗುರು ಇಂಡಸ್ಟ್ರೀಸ್ ನ ಮಾಲೀಕರಿಂದ ಪರಿಹಾರ ನೀಡಲು ಈಗಾಗಲೇ ಅವರೊಂದಿಗೆ ಚರ್ಚಿಸಿದ್ದೇವೆ, ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಒಪ್ಪಿಸಲಾಗಿದೆ, ಈ ಹಿನ್ನಲೆಯಲ್ಲಿ ಕಂಪನಿಯ ಮಾಲೀಕರಿಂದ ಮೃತರ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಇನ್ನೋರ್ವ ಗಾಯಾಳುವಿಗೆ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು. ಹಾಗೂ ಸರಕಾರದ ವತಿಯಿಂದ ಮೃತರ ಕುಟುಂಬಗಳಿಗೆ ಎರಡು ಲಕ್ಷ ರೂ. ಹಾಗೂ ಗಾಯಾಳುವಿಗೆ 50 ಸಾವಿರ ರೂ. ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದರು.
ಇನ್ನು ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಬಳಸದೆ ನಿಯಮ ಉಲ್ಲಂಘನೆ ಆಗಿದೆಯೋ ಇಲ್ಲವೋ ಮತ್ತು ಆ ಘಟನೆ ನಡೆಯಲು ಕಾರಣಗಳೇನು ಎನ್ನುವುದು ತನಿಖೆಯ ನಂತರ ಗೊತ್ತಾಗಲಿದೆ ಇದನ್ನೆ ಉದಾಹರಣೆಯಾಗಿಟ್ಟುಕೊಂಡು ರಾಜ್ಯದ ಎಲ್ಲಾ ಕಾರ್ಖಾನೆಗಳಿಗೆ ಸುರಕ್ಷತಾ ಕ್ರಮಗಳ ಬಳಕೆ ಕುರಿತಂತೆ ಸೂಚನೆ ನೀಡಲಾಗುವುದು ಎಂದರು.