ದುರುದ್ದೇಶದಿಂದ ನನ್ನ ವಿರುದ್ಧ ಸುಳ್ಳು ಸುದ್ದಿ: ವಾಲ್ಮೀಕಿ ಶ್ರೀ ಆರೋಪ
ಹರಿಹರ, ಅ.1: ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಯಾವುದೇ ಒಂದು ಆರೋಪವನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದರೆ ಸಮಾಜ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಮಠ, ಗುರುಗಳು, ಧರ್ಮದರ್ಶಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳಿಗೆ ಸ್ಪಷ್ಟೀಕರಣ ನೀಡಲು ರವಿವಾರ ಗುರುಪೀಠದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ವಾಲ್ಮೀಕಿ ಜಾತ್ರೆಗೆ ಧರ್ಮಗುರುಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಕೆಲವರು ಸಂಸಾರಸ್ಥ ಸ್ವಾಮೀಜಿಯೊಬ್ಬರನ್ನು ಆಹ್ವಾನಿಸಲು ತಿಳಿಸಿದ್ದರು. ಅದನ್ನು ನಿರಾಕರಿಸಿದ್ದಕ್ಕೆ ಆ ಸ್ವಾಮೀಜಿ ಷಡ್ಯಂತ್ರ ನಡೆಸಿ, ನಮಗೆ ಮದುವೆಯಾಗಿದೆ, ಮಕ್ಕಳಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಸಮಾಜದ 8-10 ಜನರು ದುರುದ್ದೇಶದಿಂದ ಅದನ್ನು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆಂದರು.
ತಾನು ಮದುವೆ ಆಗಿರುವುದಾಗಲಿ, ಮಕ್ಕಳಿರುವುದಾಗಲಿ ಶುದ್ದ ಸುಳ್ಳು. ಒಂದು ವೇಳೆ ಭಕ್ತರಲ್ಲಿ ಇನ್ನೂ ಸಂಶಯವಿದ್ದರೆ ಡಿಎನ್‌ಎ ಪರೀಕ್ಷೆಗೆ ಸಿದ್ಧನಿದ್ದೇನೆ. ನೀವು ಯಾರೆ ಕರೆದರೂ ಬಂದು ಪರೀಕ್ಷೆಗೆ ಒಳ ಪಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಮಠದಲ್ಲಿ ಅನ್ಯ ಜಾತಿಯವರಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದಗಂಗಾ ಮಠ, ಸುತ್ತೂರು ಮಠ, ಮುರುಘಾಮಠ, ಮೂರು ಸಾವಿರ ಮಠ ಸೇರಿದಂತೆ ರಾಜ್ಯದ ಬಹುತೇಕ ಮಠಗಳಲ್ಲೂ ಬೇರೆ ಬೇರೆ ಜಾತಿಯ ನೌಕರರು, ಕೆಲಸಗಾರರಿದ್ದಾರೆ. ನನ್ನ ವಾಹನ ಚಾಲಕ ಬೇರೆ ಜಾತಿಗೆ ಸೇರಿದ್ದು, ಒಮ್ಮೆ ಆತ ತಪ್ಪುಮಾಡಿದ್ದಾಗ ನಮ್ಮ ಆಡುಭಾಷೆಯಲ್ಲಿ ಬೈದಾಡಿದ್ದೆ, ಆದರೆ ಆ ಆಡಿಯೊವನ್ನು ಜಾಲತಾಣದಲ್ಲಿ ಪ್ರಸಾರ ಮಾಡಿ ತನ್ನ ತೇಜೋವಧೆ ಮಾಡಲಾಯಿತು. ಚಾಲಕನೂ ಅವರೊಂದಿಗೆ ಕೈಜೋಡಿಸಿದ್ದ, ನಂತರ ಕ್ಷಮೆ ಕೇಳಿದ ಎಂದರು.
ಮಠದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತವೆ ಎಂದು ಆರೋಪಿಸಲಾಗಿದೆ. ಮಠದಲ್ಲಿ ಆಡಳಿತಾಧಿಕಾರಿ, ಮ್ಯಾನೇಜರ್, ಟ್ರಸ್ಟಿಗಳು ಸೇರಿದಂತೆ 27 ಜನ ಸಿಬ್ಬಂದಿಯಿದ್ದು, ಅವರೆ ಮಠದ ನಿತ್ಯ ವ್ಯವಹಾರ ನೋಡಿಕೊಳ್ಳುತ್ತಾರೆ. ಅವರಿಗೆ ತಿಳಿಯದಂತೆ ಯಾವ ಅನೈತಿಕ ಚಟುವಟಿಕೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ ಶ್ರೀಗಳು, ಬಾಯಿಗೆ ಬಂದಂತೆ ಆರೋಪಿಸಬಾರದು, ನಿರ್ದಿಷ್ಟವಾಗಿ ಸಾಕ್ಷ್ಯ ಸಮೇತ ಸಾಬೀತುಪಡಿಸಬೇಕೆಂದು ಆಗ್ರಹಿಸಿದರು.
ಹಣಕಾಸು ಅವ್ಯವಹಾರದ ಆರೋಪವನ್ನೂ ಮಾಡಲಾಗುತ್ತಿದೆ, ಮಠದ ಆಸ್ತಿಗಳು ಸ್ವಾಮೀಜಿ ಹೆಸರಿನಲ್ಲಿವೆ ಎಂದು ಹೇಳುತ್ತಿದ್ದಾರೆ. ಈ ಮಠ, ಜಮೀನು ಮುಂಚೆ ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ ಹೆಸರಲ್ಲಿತ್ತು. ಅವರ ಮರಣಾನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡ ತನ್ನ ಹೆಸರಿಗೆ ವರ್ಗಾವಣೆಯಾಗಿದೆ. ಅದರಂತೆ ತನ್ನ ಅವಧಿಯಲ್ಲಿ ಖರೀದಿಸಿದ 18 ಆಸ್ತಿಗಳು ತನ್ನ ಹೆಸರಿನಲ್ಲಿದ್ದು, ತನ್ನ ನಂತರ ಮುಂಬರುವ ಮಠಾಧೀಶರ ಹೆಸರಿಗೆ ವರ್ಗಾವಣೆಯಾಗಲಿವೆ. ಆ ಆಸ್ತಿಗಳು ನನ್ನ ವೈಯಕ್ತಿಕವಲ್ಲ, ನನ್ನ ಪೂರ್ವಾಶ್ರಮದ ಹೆಸರು ರಮೇಶ್ ಬಸಪ್ಪ ಹೆಸರಿನಲ್ಲಿಲ್ಲ. ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಹೆಸರಿನಲ್ಲಿವೆ. ಹಿಂದೆ ಪುಣ್ಯಾ ನಂದಪುರಿ ಶ್ರೀಗಳ ಪೂರ್ವಾಶ್ರಮ ತಂದೆ-ತಾಯಿ ಆ ಆಸ್ತಿಗಳು ತಮಗೆ ಸೇರಿದ್ದಾವೆಂದು ದಾವೆ ಹೂಡಿದ್ದರು. ಆದರೆ ನ್ಯಾಯಾಲಯ ಮಠದ ಆಸ್ತಿಗಳೆಂದು ಘೋಷಿಸಿತು. ಮುಂದೆ ಕೆಟ್ಟ ಬುದ್ದಿ ಬಂದು ನಮ್ಮ ಸಂಬಂಧಿಗಳೂ ಹಕ್ಕು ಸ್ಥಾಪಿಸಲು ಮುಂದಾಗಬಹುದಾದ್ದರಿಂದ ಈಗಲೇ ಟ್ರಸ್ಟ್ ಹೆಸರಿಗೆ ವರ್ಗಾಯಿಸಲು ನಾನು ಸಿದ್ಧನಿದ್ದೇನೆ ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳೂ ಮಠದ ಬೆಳವಣಿಗೆಗೆ ಸಹಕರಿಸಿವೆ. 25 ಕೋ.ರೂ. ಸರಕಾರದ ಅನುದಾನದಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಸಾಧಿಸಲಾಗಿದೆ. ಸರಕಾರದ ಕಾಮಗಾರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿರುತ್ತವೆ, ನಾವು ಸಣ್ಣ-ಪುಟ್ಟ ಬದಲಾವಣೆ ಮಾಡಿಸಿಕೊಂಡಿರಬಹುದು . ಗುತ್ತಿಗೆದಾರರು ಅಲ್ಪಸ್ವಲ್ಪ ವ್ಯತ್ಯಾಸ ಮಾಡಿರಬಹುದು, ಅದಕ್ಕೆ ತನ್ನನ್ನು ಹೊಣೆ ಮಾಡಬಹುದೇ ಎಂದು ಪ್ರಶ್ನಿಸಿದರು. ಮೀಸಲಾತಿಯಲ್ಲಿ ನಿಜವಾದ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಬಾರದೆಂದು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಹಿಂದೆ ತಳವಾರ ಎಂಬುದು ಹುದ್ದೆಯಾಗಿತ್ತು, ಎಲ್ಲ ಜಾತಿಯಲ್ಲೂ ತಳವಾರರು ಇದ್ದರು, ಆದರೆ ಅವರೆಲ್ಲಾ ವಾಲ್ಮೀಕಿಗಳಲ್ಲ, ಬೇಡರಲ್ಲ, ಆದರೂ ರಾಜಕಾರಣಿಗಳು ಓಟಿನ ಆಸೆಗಾಗಿ ಅವರನ್ನೆಲ್ಲಾ ಎಸ್‌ಟಿ ಮೀಸಲಾತಿಗೆ ತರಲು ಪ್ರಯತ್ನಿಸುತ್ತಿದ್ದು, ಅದನ್ನು ತಡೆಯಲು ನಾನು ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಸಮಸ್ತ ವಾಲ್ಮೀಕಿ ಸಮುದಾಯದ ಹಿತವೇ ನನಗೆ ಮುಖ್ಯವಾಗಿದೆ. ಆದಾಗ್ಯೂ ತನ್ನ ತೇಜೋವಧೆ, ಚಾರಿತ್ರ್ಯ ವಧೆ ಮಾಡಲಾಗುತ್ತಿದೆ ಎಂದು ಬೇಸರಿಸಿಕೊಂಡರು.
ʼʼತನಿಖೆಯಿಂದ ಶ್ರೀಗಳು ವಾಲ್ಮೀಕಿ ಜಾತಿಗೆ ಸೇರಿದವರೆಂದು ದೃಢವಾಗಿದೆ. ಇನ್ನು ಶ್ರೀಗಳು ಮದುವೆ, ಮಕ್ಕಳಾದ ಬಗ್ಗೆ ಡಿಎನ್‌ಎ ಪರೀಕ್ಷೆಗೆ ಒಳಪಡಲು ಸಿದ್ಧರಿದ್ದಾರೆ. ಬೇರೆ ಜಾತಿಗೆ ಸೇರಿದ ಚಾಲಕನನ್ನು ನೇಮಿಸಿಕೊಂಡಿರುವುದು ತಪ್ಪಲ್ಲ, ಆಧಾರರಹಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಹರಿಬಿಡಬಾರದು. ಅದರಿಂದ ನಮ್ಮ ಸಮುದಾಯದ ಗೌರವಕ್ಕೆ ಧಕ್ಕೆ ಬರುತ್ತದೆ. ಇಂತಹ ವಿಷಯಗಳ ಬಗ್ಗೆ ನಮ್ಮ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ನಮ್ಮನ್ನು ಭೂ ಹೀನ, ಶಿಕ್ಷಣ ರಹಿತ ಗೊಳಿಸಿದವರ್ಯಾರು ಎಂಬುದರ ಕುರಿತು ಮನುವಾದ ಸೋಲಿಸುವ ಕುರಿತು ನಾವು ಚಿಂತಿಸಬೇಕಿದೆ. ಯಾರೇ ತಪ್ಪು ಮಾಡಿದ್ದರೂ ಬಯಲಾಗುತ್ತದೆʼʼ
- ಸತೀಶ್ ಜಾರಕಿಹೊಳಿ, ಸಚಿವ ಹಾಗೂ ಗುರುಪೀಠದ ಧರ್ಮದರ್ಶಿ