‘ದ್ವೇಷ ಸಾಧಿಸುವುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು
ಮಲ್ಲಿಕಾರ್ಜುನ ಖರ್ಗೆ(PTI)
ಬೆಂಗಳೂರು : ‘ಯಾರಿಗಾದರೂ ನೋವಾದರೆ ಎಲ್ಲರೂ ಒಟ್ಟಾಗಬೇಕು. ಒಗ್ಗಟ್ಟಿದ್ದರೆ ಮಾತ್ರ ಖುಷಿ. ದ್ವೇಷ ಸಾಧಿಸುವುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋದರೆ ಪಕ್ಷ ಇನ್ನಷ್ಟು ಬಲಗೊಳ್ಳುತ್ತದೆ’ ಎಂದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಕಿವಿಮಾತು ತಿಳಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏನಾದರೂ ಆದರೆ ಇನ್ನೊಬ್ಬರು ಖುಷಿ ಪಡುವುದು, ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಏನಾದರೂ ಆದರೆ ಮತ್ತೊಬ್ಬರು ಖುಷಿ ಪಡುವುದನ್ನು ಬಿಡಬೇಕು. ಏನೇ ಆದರೂ ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು.
‘ಒಬ್ಬರನ್ನು ಕಂಡರೆ ಮತ್ತೊಬ್ಬರು ಉರಿದುಕೊಳ್ಳಬೇಡಿ. ನಿಮ್ಮನ್ನು ಅಟ್ಟಕ್ಕೇರಿಸಿ ಪಕ್ಷ ಹಾಳು ಮಾಡುವವರಿದ್ದಾರೆ. ಅವರು ಹೇಳಿದಂತೆ ಕೇಳಿದರೆ ಪಕ್ಷವೇ ಒಡೆದು ಹೋಗುತ್ತದೆ. ಮೊದಲು ನೀವು ಎಚ್ಚೆತ್ತುಕೊಳ್ಳಿ. ಒಗ್ಗಟ್ಟಿನಿಂದ ಎಲ್ಲರೂ ಹೋರಾಡಿ ಆಗ ಪಕ್ಷ ಬಲಗೊಳ್ಳುತ್ತದೆ. ಎಲ್ಲರೂ ಒಂದಾಗಿದ್ದರೆ ಯಾರೂ ನಿಮ್ಮ ಮೇಲೆ ಕೈ ಎತ್ತುವುದಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ರಾಜ್ಯ ರಾಜಕಾರಣದ ವಿಚಾರದಲ್ಲಿ ನಾನು ಕೈ ಹಾಕುವುದಿಲ್ಲ. ಏನೇ ಕೇಳಿದರೂ ರಾಜ್ಯದ ನಾಯಕರನ್ನು ಕೇಳಿ ಎಂದು ಹೇಳುತ್ತೇನೆ. ನಾನೇನಾದರೂ ಮಾತನಾಡಿದರೆ ರಾಷ್ಟ್ರಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ. ಅದಕ್ಕೆ ನಾನು ಏನೂ ಮಾತನಾಡಲ್ಲ. ಇಲ್ಲಿ ನೀವೇ ಬಗೆಹರಿಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.