ʼಶಕ್ತಿ ಯೋಜನೆʼ ಪರಿಷ್ಕರಣೆ ಕುರಿತು ಹೇಳಿಕೆ : ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ
Screengrab :x/@INCKarnataka
ಬೆಂಗಳೂರು: ʼಶಕ್ತಿ ಯೋಜನೆʼ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಡಿದ ಮಾತುಗಳು ಭಾರೀ ಸಂಚಲನ ಮೂಡಿಸಿದ್ದು, ಡಿಕೆಶಿ ಹೇಳಿಕೆ ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗಿದೆ. ಈ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಇಂದು(ಅ.31) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ‘ಶಕ್ತಿ ಯೋಜನೆ ನಿಲ್ಲಿಸುತ್ತೇವೆಂದು ನೀನೇನೋ ಹೇಳಿರುವೆ’ ಎಂದು ಪಕ್ಕದಲ್ಲಿದ್ದ ಡಿ.ಕೆ.ಶಿವಕುಮಾರ್ ರನ್ನು ಪ್ರಶ್ನಿಸಿದಾಗ ಅದಕ್ಕೆ, ‘ನಾನು ಏನೂ ಹೇಳಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಆಗ ಮಾತು ಮುಂದುವರೆಸಿದ ಖರ್ಗೆ, ‘ನೀನು ಪತ್ರಿಕೆಗಳನ್ನು ನೋಡಿಲ್ಲ, ನಾನು ಪ್ರತಿನಿತ್ಯ ಪತ್ರಿಕೆಗಳನ್ನು ನೋಡುತ್ತೇನೆ, ಪತ್ರಿಕೆಯಲ್ಲಿ ನೀನು ಹೇಳಿದೆ ಅಂತ ಬಂದಿದೆ’ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಇಲ್ಲ.. ಶಕ್ತಿ ಯೋಜನೆ ಪರಿಷ್ಕರಣೆ ಮಾಡಲು ಚಿಂತನೆ ಮಾಡುತ್ತೇವೆಂದು ಹೇಳಿದ್ದಾರೆ’ ಎಂದು ವಿವರಣೆ ನೀಡಿದರು.
ಬಳಿಕ ಪ್ರತಿಕ್ರಿಯಿಸಿದ ಖರ್ಗೆ ಅವರು, ‘ಪರಿಷ್ಕರಣೆ ಮಾಡುತ್ತೇವೆ ಅಂದಿದ್ದಕ್ಕೆ ಈಗ ಎಲ್ಲರೂ ಅನುಮಾನ ಪಡುತ್ತಾರೆ. ನಿಮ್ಮ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ನಾವು ಮಹಾರಾಷ್ಟ್ರ ರಾಜ್ಯದಲ್ಲಿಯೂ ಅನುಕರಣೆ ಮಾಡುತ್ತಿದ್ದೇವೆ. ಅವರಿಗೆ ಹೇಳಿದ್ದೇವೆ. ಐದು, ಆರು, ಹತ್ತು ಗ್ಯಾರಂಟಿ ಅಂತ ಘೋಷಿಸಬೇಡಿ. ನಿಮ್ಮಲ್ಲಿ ಏನು ಬಜೆಟ್ ಇದೆ. ಬಜೆಟ್ಗೆ ಅನುಗುಣವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಅಲ್ಲಿನ ನಾಯಕರಿಗೆ ಹೇಳಿದ್ದೇವೆ’ ಎಂದು ಉಲ್ಲೇಖಿಸಿದರು.
‘ಬಜೆಟ್ ಬಿಟ್ಟು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ದಿವಾಳಿ ಆಗಿ ಹೋಗುತ್ತದೆ. ರಸ್ತೆ ಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲು ಹಣ ಇರುವುದಿಲ್ಲ. ಆಗ ಎಲ್ಲರೂ ನಿಮ್ಮ ಮೇಲೆ ಮುಗಿಬೀಳುತ್ತಾರೆ. ಈ ಸರಕಾರ ವಿಫಲವಾದರೆ, ಕೆಟ್ಟ ಹೆಸರು ಬಿಟ್ಟು ಹೋಗುತ್ತೀರಾ ಹೊರತು, ಒಳ್ಳೆಯ ಹೆಸರು ಇಟ್ಟು ಹೋಗುವುದಿಲ್ಲ. ಮತ್ತೆ 10 ವರ್ಷ ವನವಾಸದಲ್ಲಿ ಇರಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ʼಶಕ್ತಿʼ ಬಗ್ಗೆ ಡಿಕೆಶಿ ಹೇಳಿದ್ದೇನು?
ʼಶಕ್ತಿ ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಹಲವು ಮಹಿಳೆಯರು ಸಾಮಾಜಿಕ ಜಾಲತಾಣ ಹಾಗೂ ಇ–ಮೇಲ್ ಮೂಲಕ ಮನವಿ ಮಾಡಿದ್ದಾರೆ. ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸುವಾಗ ನಾವು ಹಣ ಕೊಡಲು ಮುಂದಾದರೂ ನಿರ್ವಾಹಕರು ನಿರಾಕರಿಸುತ್ತಾರೆ. ಆರ್ಥಿಕವಾಗಿ ಅನುಕೂಲ ಸ್ಥಿತಿಯಲ್ಲಿ ಇರುವ ಕಾರಣ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದ್ದು, ನಮಗೆ ಉಚಿತ ಪ್ರಯಾಣ ಬೇಡವೆಂದು ಶೇ.5ರಿಂದ 10ರಷ್ಟು ಮಹಿಳೆಯರು ಹೇಳುತ್ತಿದ್ದಾರೆ. ಈ ಕುರಿತು ಪ್ರತ್ಯೇಕ ಸಭೆ ಕರೆದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಜತೆ ಚರ್ಚಿಸಲಾಗುವುದುʼ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.