ಚಲಿಸುತ್ತಿರುವ ರೈಲು ಹತ್ತಲು ಹೋಗಿ ವ್ಯಕ್ತಿಗೆ ಗಂಭೀರ ಗಾಯ
ಕಲಬುರಗಿ: ಚಲಿಸುತ್ತಿದ್ದ ರೈಲನ್ನು ಹಿಡಿಯಲು ಹೋಗಿ ವ್ಯಕ್ತಿಯೋರ್ವ ರೈಲು ಮತ್ತು ಪ್ಲಾಟ್ ಫಾರಂ ಮಧ್ಯದಲ್ಲಿ ಸಿಲುಕಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ತಾಪುರ ಪಟ್ಟಣದ ರೈಲು ನಿಲ್ದಾಣದಲ್ಲಿ ಮಂಗಳವಾರ ನಡೆದಿರುವ ಬಗ್ಗೆ ವೆದಿಯಾಗಿದೆ.
ಗಾಯಗೊಂಡಿರುವ ವ್ಯಕ್ತಿಯನ್ನು ಕಲಗುರ್ತಿ ಗ್ರಾಮದ ನಿವಾಸಿಯಾಗಿರುವ ಮಲ್ಲಿಕಾರ್ಜುನ ಗುಂಡಪ್ಪ(44) ಎಂದು ಗುರುತಿಸಲಾಗಿದೆ. ಚಿತ್ತಾಪುರ ದಿಂದ ಹೈದರಾಬಾದ್ ಹೋಗುವ ಪ್ಯಾಸೆಂಜರ್ ರೈಲು ಚಲಿಸುತ್ತಿರುವಾಗ ಹತ್ತಲು ಹೋಗಿ ಕೈ ಜಾರಿ ರೈಲು ಮತ್ತು ಪ್ಲಾಟ್ ಫಾರಂ ಮದ್ಯದಲ್ಲಿ ಸಿಕ್ಕಿಬಿದ್ದ ಪರಿಣಾಮ ಕಾಲು ಮತ್ತು ಬಲಭಾಗದ ಸೊಂಟದ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅಧಿಕವಾಗಿ ರಕ್ತಸ್ರಾವವಾಗಿದೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿದ್ದ ಆರ್ ಪಿ ಎಫ್ ಅಧಿಕಾರಿ ಮನ್ಮಂತ, ರೈಲ್ವೆ ಪೋಲಿಸ್ ಸಚಿನ್ ಎಂಬವರು ಗಾಯಾಳುವನ್ನು ಹೊರ ತೆಗೆದು 108 ತುರ್ತು ವಾಹನಕ್ಕೆ ಕರೆಮಾಡಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಗೃಹ ರಕ್ಷಕ ದಳದ ಸಿಬ್ಬಂದಿ ಮಂಜುನಾಥ ಕಾಶಿ ಮತ್ತು ಶ್ಯಾಮರಾವ್ ಕಾಶಿ, ರೈಲ್ವೆ ಸಿಬ್ಬಂದಿ ರಾಜೇಶ್ ಮತ್ತು ಬಂಡು ಅವರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ದಾರೆ ತಿಳಿದು ಬಂದಿದೆ.