ಮಂಡ್ಯ ಕ್ಷೇತ್ರದ ಸೀಟು ಹಂಚಿಕೆ ಇನ್ನೂ ತೀರ್ಮಾನವಾಗಿಲ್ಲ: ಜೆಪಿ ನಡ್ಡಾ ಭೇಟಿ ಬಳಿಕ ಸುಮಲತಾ ಅಚ್ಚರಿಯ ಹೇಳಿಕೆ
"ಲೋಕಸಭಾ ಅವಧಿ ಮುಕ್ತಾಯದ ನಂತರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ"
File Photo
ಬೆಂಗಳೂರು: ‘ಮಂಡ್ಯ ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆ ಸಂಬಂಧ ಇನ್ನೂ ಅಂತಿಮ ತೀರ್ಮಾನವಾಗಿಲ್ಲ’ ಎಂದು ಹಾಲಿ ಸಂಸದೆ ಸಮಲತಾ ಅಂಬರೀಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಂಡ್ಯ ಕ್ಷೇತ್ರದ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಂಡ್ಯ ಕ್ಷೇತ್ರದಿಂದಲೇ ಟಿಕೆಟ್ ಕೊಡಲು ನಾನು ಕೇಳಿದ್ದೇನೆ. ಪ್ರಧಾನಿ ಮೋದಿಯವರು ನನಗೆ ಭರವಸೆ ನೀಡಿದ್ದಾರೆ. ನಿಮ್ಮನ್ನ ಮತ್ತು ನಿಮ್ಮ ಕಾರ್ಯಕರ್ತರನ್ನ ಕೈಬಿಡುವ ಪ್ರಶ್ನೆ ಇಲ್ಲ ಎಂದು ಭರವಸೆ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ನನ್ನ ಮುಂದಿನ ನಿರ್ಧಾರವನ್ನ ಕ್ಷೇತ್ರಕ್ಕೆ ತೆರಳಿ ನಮ್ಮ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ. ನನ್ನ ಲೋಕಸಭಾ ಅವಧಿ ಮುಕ್ತಾಯದ ನಂತರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಸುಮಲತಾ ತಿಳಿಸಿದರು.
‘ನನ್ನ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ನಿಶ್ಚಿಂತೆಯಾಗಿರಿ ಏನೂ ನಿರ್ಧಾರ ಆಗಿಲ್ಲ ಎಂದು ಜೆ.ಪಿ ನಡ್ಡಾ ಹೇಳಿದ್ದಾರೆ. ನಿಮ್ಮಂತಹ ನಾಯಕಿ ಬಿಜೆಪಿ ಪಕ್ಷಕ್ಕೆ ಬೇಕು. ಈ ಬಗ್ಗೆ ಸಭೆ ನಡೆಯಲಿದ್ದು, ಮಂಡ್ಯ ಕ್ಷೇತ್ರದ ಬಗ್ಗೆ ಅಂತಿಮ ತೀರ್ಮಾನವನ್ನು ತಿಳಿಸುತ್ತೇವೆಂದು ನಡ್ಡಾ ಹೇಳಿದ್ದಾರೆ’ ಎಂದು ಸುಮಲತಾ ಅಂಬರೀಶ್ ವಿವರಣೆ ನೀಡಿದರು.
ನಾನು ಸ್ಪರ್ಧೆ ಮಾಡಬೇಕು ಎನ್ನುವುದಕ್ಕಿಂತ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ಬಿಜೆಪಿ ಪಕ್ಷ ಉಳಿಯುತ್ತದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ವಿಚಾರ ಕೇವಲ ಊಹಾಪೋಹ. ಯಾವ ಕ್ಷೇತ್ರ ಖಾಲಿ ಇರುತ್ತೆ ಅಲ್ಲಿ ನನ್ನ ಹೆಸರು ಜೋಡಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತೇವೆಂದು ಆ ಪಕ್ಷ ಹೇಳುವುದು ಸಹಜ. ಬಿಜೆಪಿ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಂಬುದನ್ನು ನೋಡಿಕೊಂಡು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ. ನನ್ನ ಕಾರ್ಯಕರ್ತರನ್ನು ಬಿಟ್ಟು ನಿರ್ಧಾರ ಮಾಡುವುದಿಲ್ಲ. ಏನೇ ಆಗಲಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಸುಮಲತಾ ತಿಳಿಸಿದರು.