ಮಂಗಳೂರು: ಮಹೀಂದ್ರಾ ಇಲೆಕ್ಟ್ರಿಕ್ ರಿಕ್ಷಾ ಕಂಪೆನಿ ವಿರುದ್ಧ ರಿಕ್ಷಾ ಚಾಲಕರಿಂದ ಪ್ರತಿಭಟನೆ
ಮಂಗಳೂರು, ಜ.10: ಮಹೀಂದ್ರಾ ಇಲೆಕ್ಟ್ರಿಕ್ ಆಟೊ ರಿಕ್ಷಾ ಕಂಪೆನಿ ಧೋರಣೆಯನ್ನು ಖಂಡಿಸಿ ರಿಕ್ಷಾ ಚಾಲಕರು ಮತ್ತು ಮಾಲಕರು ನಗರದ ಮಿನಿ ವಿಧಾನ ಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಚಾಲಕರು ಮತ್ತು ಮಾಲಕರು ಇವಿ ಟ್ರಿಯೋ ರಿಕ್ಷಾ ಕಮಿಟಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹೀಂದ್ರ ಇಲೆಕ್ಟ್ರಿಕ್ ಕಂಪೆನಿಯ ಧೋರಣೆಯ ವಿರುದ್ಧ ರಿಕ್ಷಾ ಚಾಲಕರು ಮತ್ತು ಮಾಲಕರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಿಕ್ಷಾ ಚಾಲಕರಿಗೆ ಇವಿ ರಿಕ್ಷಾಗಳ ಬಗ್ಗೆ ಯಾವುದೇ ಸಮಸ್ಯೆ ಬರದಂತೆ ಕಂಪೆನಿ ನೋಡಿಕೊಳ್ಳಬೇಕು, ಇವಿ ರಿಕ್ಷಾಗಳನ್ನು ಕ್ಲಪ್ತ ಸಮಯದಲ್ಲಿ ದುರಸ್ತಿ ಮಾಡಬೇಕು, ಬಿಡಿಭಾಗಗಳ ಧಾರಾಳ ದಾಸ್ತಾನು, ವಾರಂಟಿ ಷರತ್ತುಗಳ ಸಮರ್ಪಕ ಪಾಲನೆ, ರಿಕ್ಷಾ ಚಾಲಕರಿಗೆ ಏಜೆನ್ಸಿ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಮನವಿಯಲ್ಲಿ ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.
ಇವಿ ಟ್ರಿಯೋ ರಿಕ್ಷಾ ಕಮಿಟಿ ಅಧ್ಯಕ್ಷ ಅನಿಲ್ ಸಾಲ್ಡಾನ ಪಚ್ಚನಾಡಿ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಬಳಕೆಗೆ ಬಂದ ಇ.ವಿ ರಿಕ್ಷಾಗಳು ಚಾಲಕರ ಮೇಲೆ ಸಾಲದ ಹೊರೆಯನ್ನು ಹೆಚ್ಚಿಸುತ್ತಿದೆ ಹೊರತು ಆದಾಯವನ್ನು ಗಳಿಸುವಲ್ಲಿ ಯಾವ ನೆರವು ಆಗುತ್ತಿಲ್ಲ. 3.5 ಲಕ್ಷ ರೂ. ವೆಚ್ಚದಲ್ಲಿ ರಿಕ್ಷಾ ಖರೀದಿಸಿದ ಸಂದರ್ಭದಲ್ಲಿ 3 ವರ್ಷದ ಗ್ಯಾರಂಟಿಯನ್ನು ಕಂಪೆನಿ ನೀಡಿತ್ತು. ಆದರೆ ಒಂದ ವರ್ಷದೊಳಗೆಯೇ ಇ.ವಿ ರಿಕ್ಷಾಗಳು ಸಮಸ್ಯೆಗಳಿಗೆ ಗುರಿಯಾಗುತ್ತಿವೆ. ಬೈಕಂಪಾಡಿಯ ಸರ್ವಿಸ್ ಸ್ಟೇಷನ್ ಗೆ ರಿಪೇರಿಗೆ ಹೋಗುವ ಇ.ವಿ. ರಿಕ್ಷಾಗಳು ಕೇವಲ ಹೆಸರಿಗೆ ಮಾತ್ರ ರಿಪೇರಿಯಾಗಿ ಹೊರ ಬರುತ್ತಿದ್ದು, ತೊಂದರೆಗಳು ಮರುಕಳಿಸುತ್ತಲೇ ಇವೆ. ಇದು ನಮ್ಮ ದಿನದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಾಲದ ಹೊರೆಯು ಹೆಚ್ಚಾಗುತ್ತಿದೆ ಎಂದು ದೂರಿದರು.
ನಮ್ಮ ಸಮಸ್ಯೆಗಳು ಬಗೆಹರಿಯಬೇಕು, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು, ನಮ್ಮ ಬೇಡಿಕೆಗಳು ಈಡೇರಬೇಕು ಅಲ್ಲಿಯವರಗೆ ಈ ಕಾನೂನುಬದ್ದ ಶಾಂತಿಯುತ ಹೊರಾಟವನ್ನು ನಾವೂ ಕೈಬಿಡುವುದಿಲ್ಲ ಎಂದು ಅಧ್ಯಕ್ಷ ಅನಿಲ್ ಸಾಲ್ಡಾನ ತಿಳಿಸಿದರು.
ಇ.ವಿ ರಿಕ್ಷಾಗಳಿಗೆ ಕೇಂದ್ರ ಸರಕಾರದಿಂದ ಸಿಗುವ ಸಬ್ಸಿಡಿ ಯಾವ ರಿಕ್ಷಾ ಚಾಲಕರಿಗೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಕುರಿತು 20 ದಿನಗಳ ಹಿಂದೆ ಸಂಬಂಧಿಸಿದವರಿಗೆ ಪತ್ರ ಬರೆದರೂ ಯಾವ ಪ್ರಯೋಜನವಾಗಿಲ್ಲ. ಅವರ ಬಳಿ ನಮ್ಮ ಸಮಸ್ಯೆಗಳನ್ನು ಕೇಳಲು ಸಮಯವಿಲ್ಲ ಎಂದು ರಿಕ್ಷಾ ಚಾಲಕ ಮೋಹನ್ ಕಡ್ಯದ ಆಕ್ರೋಶ ವ್ಯಕ್ತ ಪಡಿಸಿದರು.
ಚಾಲಕರು ಮತ್ತು ಮಾಲಕರು ಇವಿ ಟ್ರಿಯೋ ರಿಕ್ಷಾ ಕಮಿಟಿ ಗೌರವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ರೋಹಿತ್ ಕೋಟ್ಯಾನ್ ಬಿಜೈ, ಗೌರವ ಸಲಹೆಗಾರ ಅವಿಲ್, ಪ್ರಧಾನ ಕಾರ್ಯದರ್ಶಿ ರಾಮನಾಥ ಪ್ರಭು, ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಶೈಲೇಂದ್ರ ಕೊಲ್ಯ, ಸಂಘದ ಮುಖಂಡರಾದ ಗೋವಿಂದ ಶೆಟ್ಟಿ, ಚಂದ್ರಹಾಸ್, ಅಶ್ವಿನ್ ಧೀರಜ್, ಮೋಹನ್ ಕೃಷ್ಣ, ಸುಖೇಶ್ ನಂತೂರು, ಹರೀಶ್ ಶಿವಪ್ರಸಾದ್, ಗುರುರಾಜ್ ಅಡ್ಯಾರ್, ರಶೀದ್, ಶರತ್ ಪದಂಗಡಿ ಸಂತೋಷ್, ಪ್ರಕಾಶ್ ವಿ.ಎನ್. ಪ್ರತಿಭಟನೆಯ ನೇತೃತ್ವ ವಹಿಸಿದ್ದರು.