ಮನೋರಂಜನ್ ಮನೆ, ಸಂಸದ ಪ್ರತಾಪ್ ಸಿಂಹ ಕಚೇರಿ ಪರಿಶೀಲಿಸಿದ ಆಂತರಿಕ ಭದ್ರತಾ ತಂಡ
ಮನೋರಂಜನ್ ಮನೆಗೆ ಎರಡು ಬಾರಿ ಬಂದು ಊಟ ಮಾಡಿ ಹೋಗಿದ್ದ ಸಾಗರ್ ಶರ್ಮಾ
ಮೈಸೂರು: ಸಂಸತ್ ಒಳಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿ ಬಂಧನಕ್ಕೊಳಗಾಗಿರುವ ಮನೋರಂಜನ್ ಮನೆ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಸೇರಿದಂತೆ ಹಲವು ಕಡೆ ಕೇಂದ್ರ ಆಂತರಿಕ ಭದ್ರತಾ ತಂಡ ಹಾಗೂ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.13 ರ ಬುಧವಾರ ಸಂಸತ್ ಭವನದ ಒಳಗೆ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಮನೋರಂಜನ್ ಮತ್ತು ಸಾಗರ್ ಶರ್ಮಾ ಹೊಗೆ ಬಾಂಬ್ ಪ್ರಯೋಗಿಸಿ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದರು. ಈ ಇಬ್ಬರು ಸಂಸತ್ ಪ್ರವೇಶಿಸಲು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ವೀಕ್ಷಕರ ಪಾಸ್ ನೀಡಲಾಗಿತ್ತು.
ಶುಕ್ರವಾರ ಬೆಳಿಗ್ಗೆ ನಗರದ ವಿಜಯನಗರ 2ನೇ ಹಂತದಲ್ಲಿರುವ ಮನೋರಂಜನ್ ಮನೆಗೆ ಭೇಟಿ ನೀಡಿದ ತಂಡ. ಮನೋರಂಜನ್ ಕೋಣೆಯನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಕಲೆಹಾಕಿದೆ.
ಮನೋರಂಜನ್ ತಂದೆ ದೇವರಾಜೇಗೌಡ, ತಾಯಿ ಶೈಲಜಾ ಅವರಿಂದಲೂ ಮಗನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸಾಗರ್ ಶರ್ಮಾ ಎಂಬಾತ ಎರಡು ಬಾರಿ ನಮ್ಮ ಮನೆಗೆ ಬಂದು ಊಟ ಮಾಡಿ ಹೋಗಿದ್ದ ಎಂಬ ಮಾಹಿತಿಯನ್ನು ಮನೋರಂಜನ್ ತಾಯಿ ಶೈಲಜಾ ಆಂತರಿಕ ಭದ್ರತಾ ತಂಡಕ್ಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಂತರ ಮೈಸೂರು-ಹುಣಸೂರು ರಸ್ತೆಯ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೂ ಭೇಟಿ ನೀಡಿ, ಆಂತರಿಕ ಭದ್ರತಾ ತಂಡ ಸಂಸದರ ಕಚೇರಿಗೆ ಕಳೆದ ಒಂದು ತಿಂಗಳಿನಿಂದ ಭೇಟಿ ನೀಡಿರುವವರ ಮಾಹಿತಿ ಮತ್ತು ವೀಕ್ಷಕರ ಪುಸ್ತಕದಲ್ಲಿ ದಾಖಲಾಗಿರುವವರ ಹೆಸರು ವಿಳಾಸಗಳ ಮಾಹಿತಿಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ಕೇಂದ್ರ ಆಂತರಿಕಾ ಭದ್ರತಾ ತಂಡ ಇನ್ನೂ ಹಲವು ಮಾಹಿತಿಗಳನ್ನು ಕಲೆಹಾಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮನೋರಂಜನ್ ಮನೆಯ ಮುಂದೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಿ ಬಂದೋಬಸ್ತ್ ನೀಡಿದ್ದಾರೆ. ಜೊತೆಗೆ ಮನೆಯ ಬಳಿಗೆ ಯಾರ್ಯಾರು ಬಂದಿದ್ದರು ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.