ವಿಕಸಿತ ಭಾರತ ಸಂಕಲ್ಪಕ್ಕೆ ಭಾರಿ ಜನಬೆಂಬಲ: ಬಿ.ವೈ.ವಿಜಯೇಂದ್ರ
ಬೆಂಗಳೂರು: 2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ನರೇಂದ್ರ ಮೋದಿಜೀ ಅವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಗೋಡೆ ಬರಹ ಆರಂಭಿಸಲಾಗಿದೆ. ಪ್ರತಿ ಬೂತ್‍ನಲ್ಲಿ 5 ಕಡೆ ಗೋಡೆ ಬರಹಕ್ಕೆ ಚಾಲನೆ ಕೊಡಲಾಗುತ್ತದೆ. 2024ಕ್ಕೆ ಮತ್ತೊಮ್ಮೆ ಮೋದಿ ಎಂಬುದು ದೇಶದ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.
ಹಾವೇರಿ ಮಹಿಳೆ ಮೇಲೆ ಅತ್ಯಾಚಾರ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ವಿಷಯದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪದೇಪದೇ ಈ ರೀತಿಯ ಘಟನೆಗಳು ಆಗುತ್ತಿವೆ. ಬೆಳಗಾವಿ, ಹಾವೇರಿಯ ಮಹಿಳೆಯರ ಮೇಲಿನ ದೌರ್ಜನ್ಯದಂಥ ಘಟನೆಗಳು ನಾಚಿಕೆಗೇಡಿನ ಸಂಗತಿ. ಜ.7ರಂದು ಈ ಘಟನೆ ನಡೆದು ಒಂದು ವಾರ ಕಳೆದರೂ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ಎಫ್‍ಐಆರ್ ಕೂಡ ದಾಖಲಿಸಿಲ್ಲ. ಮತ್ತೊಂದು ಕಡೆ ಈ ದುರ್ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಆಗುತ್ತಿದೆ. ಇದು ಬೇಸರದ ಮತ್ತು ಖಂಡನೀಯ ವಿಚಾರ ಎಂದರು.
ಬಿಜೆಪಿಯ ಹಿರಿಯರು ಅಲ್ಲಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ. ರಾಜ್ಯ ಸರಕಾರ ಎಚ್ಚೆತ್ತುಕೊಂಡು ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲು ಕೋರಿದ್ದೇವೆ. ರಾಜ್ಯ ಸರಕಾರವು ಇದನ್ನು ಮುಚ್ಚಿ ಹಾಕಬಾರದು ಎಂದು ಒತ್ತಾಯಿಸಿದರು.