ಈಗ ಸಂವಿಧಾನ ಯಾರನ್ನು ಗೌರವಿಸುತ್ತಿಲ್ಲ : ಪೇಜಾವರ ಶ್ರೀಗೆ ಮಾವಳ್ಳಿ ಶಂಕರ್ ಪ್ರಶ್ನೆ
ಬೆಂಗಳೂರು : ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಇತ್ತೀಚಿಗೆ ‘ಎಲ್ಲರನ್ನು ಗೌರವಿಸುವ ಸಂವಿಧಾನ ಬರಲಿ’ ಎಂದು ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದಾರೆ. ‘ಈಗ ‘ಸಂವಿಧಾನ ಯಾರನ್ನು ಗೌರವಿಸುತ್ತಿಲ್ಲ’ ಎಂದು ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಪ್ರಶ್ನೆ ಮಾಡಿದ್ದಾರೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ದಸಂಸ ಬೆಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ಸಂವಿಧಾನ ದಿನದ ಪ್ರಯುಕ್ತ ಆಯೋಜಿಸಿದ್ದ ಬಿಟಿ ಕಾಯ್ದೆ-1979 ರದ್ದುಗೊಳಿಸುವಂತೆ ಆಗ್ರಹಿಸಿ, ‘ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಧರಣಿ’ಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು, ವೈದಿಕರು ಮತ್ತು ಬ್ರಾಹ್ಮಣ್ಯವನ್ನು ಗೌರವಿಸುವಂತಹ ಸಂವಿಧಾನ ಬರಬೇಕಂತೆ, ಇದರ ಅರ್ಥ ಏನು? ಪೇಜಾವರ ಶ್ರೀ ಅಂತಹವರು ಯಾಕೆ ಸಂವಿಧಾನವನ್ನು ವಿರೋಧಿಸುತ್ತಾರೆ ಎಂದರೆ ಭಾರತದ ಸಂವಿಧಾನ ಎಲ್ಲ ಧರ್ಮಗಳು ಒಂದೇ ಎಂದು ಹೇಳುತ್ತದೆ. ಅದಕ್ಕೆ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಸಂವಿಧಾನ ಹೇಳುವುದು ಜಾತ್ಯತೀತತೆ, ಸಮಾಜವಾದವನ್ನು. ಭಾರತ ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ತೀರ್ಪು ನೀಡಿ, ಸಂವಿಧಾನದ ಪೀಠಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ ಕೆಲವರಿಗೆ ಸಂವಿಧಾನ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೇಶದ ಬಹು ಸಂಖ್ಯಾತರಿಗೆ ಸಂವಿಧಾನ ಸರಿಯಾಗಿ ಅರ್ಥವಾಗುತ್ತಿಲ್ಲ. ನಾವು ಸಂವಿಧಾನ ಅರ್ಥ ಮಾಡಿಕೊಳ್ಳದಿದ್ದರೆ ಮತ್ತೆ ನಾವು ಬ್ರಾಹ್ಮಣ್ಯದ ಗುಲಾಮಗಿರಿಗೆ ಹೋಗುತ್ತೇವೆ ಎಂದು ತಿಳಿಸಿದರು.
ಧರಣಿಯಲ್ಲಿ ದಲಿತ ಹೋರಾಟಗಾರ ಹೆಣ್ಣೂರು ಶ್ರೀನಿವಾಸ್, ದಸಂಸ ಸಂಚಾಲಕ ಜ್ಯೋತಪ್ಪ ಹೊಸಳ್ಳಿ, ಜಿಲ್ಲಾ ಸಂಚಾಲಕ ಟಿ.ಸಂಪಂಗಿರಾಮ್, ಜಿಲ್ಲಾ ಸಮಿತಿ ಸದಸ್ಯೆ ಧನಮ್ಮ ಮತ್ತಿತರರು ಹಾಜರಿದ್ದರು.
‘ಎಲ್ಲಿಯ ತನಕ ಬ್ರಾಹ್ಮಣ್ಯದ ಹಿಡಿತದಿಂದ ಹೊರಗೆ ಬರುವುದಿಲ್ಲವೋ, ಅಲ್ಲಿಯ ತನಕ ದಲಿತರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಗಳು ನಿಲ್ಲುವುದಿಲ್ಲ. ಇದನ್ನು ಅರಿತು ಅಂಬೇಡ್ಕರ್ ಅವರು ಹೋರಾಟ ಮಾಡಿದರು. ಹೊಟ್ಟೆಪಾಡಿಗಾಗಿ ಮೀಸಲಾತಿಯನ್ನು ತಂದು ಕೊಟ್ಟರು. ಮಾನಸಿಕ ಗುಲಾಮಗಿರಿಯ ವಿಮೋಚನೆಗಾಗಿ ಬುದ್ಧನನ್ನು ತೋರಿಸಿದರು. ನಾವು ಹೊಟ್ಟೆಪಾಡನ್ನು ನೋಡಿದೆವೋ, ಆದರೆ ಜ್ಞಾನದ ಕಡೆಗೆ ಹೋಗಲಿಲ್ಲ ಅದಕ್ಕಾಗಿ ಇದುವರೆಗೂ ಶೋಷಣೆ ತಪ್ಪಲಿಲ್ಲ’
-ಮಾವಳ್ಳಿ ಶಂಕರ್, ದಸಂಸ ಪ್ರಧಾನ ಸಂಚಾಲಕ