ಗುಜರಾತ್ ಮಾದರಿಯಲ್ಲೇ ರಾಜ್ಯಕ್ಕೂ ಸಬ್ಸಿಡಿ ಕೊಟ್ಟರೆ ನಾವೂ ನಮ್ಮ ಪಾಲಿನ ಸಬ್ಸಿಡಿ ನೀಡುತ್ತೇವೆ : ಎಂ.ಬಿ.ಪಾಟೀಲ್
ಬೆಂಗಳೂರು: ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಗುಜರಾತ್ ರಾಜ್ಯಕ್ಕೆ ಕೊಟ್ಟಿರುವ ಹಾಗೆ ಶೇ.50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರಕಾರ ನೀಡುವುದಾದರೆ ರಾಜ್ಯ ಸರಕಾರ ಕೂಡ ತನ್ನ ಪಾಲಿನ ಶೇ.20ರಷ್ಟು ಸಬ್ಸಿಡಿ ಕೊಡಲು ಸಿದ್ಧ ಇದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕಾದ ಮೈಕ್ರಾನ್ ಕಂಪನಿಗೆ ಕೇಂದ್ರ ಸರಕಾರವು ಶೇ.50ರಷ್ಟು ಸಬ್ಸಿಡಿ ಕೊಟ್ಟಿದೆ. ಇದರ ಜತೆಗೆ ಗುಜರಾತ್ ಸರಕಾರ ಶೇ.20ರಷ್ಟು ಸಬ್ಸಿಡಿ ಕೊಟ್ಟಿದೆ. ಈ ರೀತಿ ಕರ್ನಾಟಕ ಸರಕಾರ ಸಬ್ಸಿಡಿ ನೀಡಲು ಸಿದ್ಧವಿದೆಯೇ ಎಂದು ಕುಮಾರಸ್ವಾಮಿ ಮಂಗಳವಾರ ಇಲ್ಲಿ ಕೇಳಿದ್ದರು.
ಇದಕ್ಕೆ 'ಎಕ್ಸ್' ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿರುವ ಸಚಿವ ಪಾಟೀಲ್ ಅವರು 'ಗುಜರಾತಿಗೆ ಕೊಟ್ಟ ಹಾಗೆ ಮೊದಲು ಸಬ್ಸಿಡಿ ಕೊಡಿ. ನಂತರ ರಾಜ್ಯದ ಪಾಲಿನ ಶೇ.20ರಷ್ಟು ಸಬ್ಸಿಡಿ ನೀಡುತ್ತೇವೆ. ಈ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯುವುದಿಲ್ಲ ಎನ್ನುವ ವಿಶ್ವಾಸ ಕೂಡ ಇದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ʼಯಾವುದೇ ಉದ್ದಿಮೆ ಇರಲಿ, ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೂ ಸಮಾನ ನೀತಿ ಅನುಸರಿಸಬೇಕು ಎನ್ನುವುದು ಕರ್ನಾಟಕದ ಪ್ರತಿಪಾದನೆಯಾಗಿದೆ. ಇದು ಸಹಜನ್ಯಾಯದ ತತ್ವವಾಗಿದ್ದು, ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡಿದ್ದಾರೆʼ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರವು ಉದ್ಯಮ ಸ್ನೇಹಿ ನೀತಿಗಳನ್ನು ಅನುಸರಿಸುತ್ತಿದೆ. ಆದರೆ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ಗುಜರಾತ್ ಪರ ಧೋರಣೆ ತೋರಿಸುತ್ತಿದೆ. ನಾವು ಇದನ್ನಷ್ಟೇ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.