‘ಪ್ರಗತಿಯ ಮರುಕಲ್ಪನೆ’ ಥೀಮ್‍ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ : ಎಂ.ಬಿ.ಪಾಟೀಲ್

ಬೆಂಗಳೂರು : ‘ಇನ್ವೆಸ್ಟ್ ಕರ್ನಾಟಕ-2025’ ಜಾಗತಿಕ ಹೂಡಿಕೆದಾರರ ಸಮಾವೇಶವು `ಪ್ರಗತಿಯ ಮರುಕಲ್ಪನೆ’ ಎನ್ನುವ ಪ್ರಧಾನ ಥೀಮ್ ಒಳಗೊಂಡಿದ್ದು, ತಂತ್ರಜ್ಞಾನ-ಚಾಲಿತ, ಪರಿಸರಸ್ನೇಹಿ, ಒಳಗೊಳ್ಳುವಿಕೆ ಮತ್ತು ಕ್ಷಮತೆ ಎನ್ನುವ ನಾಲ್ಕು ಉಪ ಆಶಯಗಳನ್ನು ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ‘ಇನ್ವೆಸ್ಟ್ ಕರ್ನಾಟಕ-2025’ರ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಪರಿಶೀಲನೆ ಸಭೆ ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿನ ಕೆಲವು ಅತ್ಯುತ್ತಮ ಅಂಶಗಳನ್ನೂ ಇಲ್ಲಿ ಅಳವಡಿಸಿಕೊಂಡಿದ್ದೇವೆ. ಅಂಕಿತ ಹಾಕುವ ಒಡಂಬಡಿಕೆಗಳ ಪೈಕಿ ಶೇ. 70-80ರಷ್ಟಾದರೂ ನಿಜವಾದ ಹೂಡಿಕೆಯಾಗಿ ಪರಿವರ್ತನೆಯಾಗಬೇಕು ಎಂಬುದು ಸರಕಾರದ ಗುರಿಯಾಗಿದೆ ಎಂದರು.
ಸಮಾವೇಶದಲ್ಲಿ ರಫ್ತಿಗೆ ಉತ್ತೇಜನ ನೀಡುವಂತಹ, 2025-30ರವರೆಗಿನ ಐದು ವರ್ಷಗಳ ನೂತನ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೊ ತ್ಸಾಹ ನೀಡಲಾಗುವುದು. ಸುಲಲಿತ ವಹಿವಾಟು ಸಂಸ್ಕೃತಿ ಮತ್ತು ಏಕಗವಾಕ್ಷಿ ವ್ಯವಸ್ಥೆಗೆ ಕೂಡ ಚಾಲನೆ ನೀಡಲಾಗುವುದು ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
ಬಹುತೇಕ ಜಾಗತಿಕ ಮಟ್ಟದ ಕಂಪೆನಿಗಳೆಲ್ಲವೂ ಬೆಂಗಳೂರಿನಲ್ಲಿ ಆರ್ ಅಂಡ್ ಡಿ ಕೇಂದ್ರಗಳನ್ನು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು(ಜಿಸಿಸಿ) ಹೊಂದಿವೆ. ಆದ್ದರಿಂದ ಸ್ಥಳೀಯ ಮಟ್ಟದಲ್ಲೇ ಉತ್ಪಾದನೆಯೂ ಆಗುವಂತೆ ನೋಡಿಕೊಳ್ಳಲು ಸರಕಾರ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಪರಿಸರಸ್ನೇಹಿ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೂ ಗಮನಹರಿಸಲಾಗುವುದು ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಮೊದಲು ಕರ್ನಾಟಕ, ಮಹಾರಾಷ್ಟ್ರ, ಗುಜರಾತಿನಂತಹ ಕೆಲವೇ ರಾಜ್ಯಗಳು ಮಾತ್ರ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದವು. ಈಗ ಹೆಚ್ಚಿನ ರಾಜ್ಯಗಳು ಇಂತಹ ಸಮಾವೇಶ ಹಮ್ಮಿಕೊಳ್ಳುತ್ತಿವೆ. ಈ ಸಲದ ಸಮಾವೇಶದಲ್ಲಿ ಕುಮಾರ್ ಬಿರ್ಲಾ, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಸೇರಿದಂತೆ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.