ಪ್ರಾಂಶುಪಾಲರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ : ಡಾ.ಎಂ.ಸಿ.ಸುಧಾಕರ್

ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪದವಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ದಾಖಲೆಗಳ ಪರಿಶೀಲನೆಯ ಹಂತದಲ್ಲಿದೆ. ಈ ಸಂಬಂಧ ಶೀಘ್ರವಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲು ಕ್ರಮ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ಕೆಇಎ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿದೆ ಎಂದರು.
ಜತೆಗೆ ಸರಕಾರಕ್ಕೆ ಸಲ್ಲಿಸಿರುವ ಅಂತಿಮ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ (ವಿಶೇಷ) ನಿಯಮಗಳು 2020ರ ನಿಯಮ 4ರನ್ವಯ ಕಾಲೇಜು ಶಿಕ್ಷಣ ಆಯುಕ್ತರ ಅಧ್ಯಕ್ಷತೆಯಲ್ಲಿನ ಆಯ್ಕೆ ಪ್ರಾಧಿಕಾರವು ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ ಮೀಸಲಾತಿ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿದೆ ಎಂದರು.
ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿಯಲ್ಲಿ ದಾಖಲಿಸಿದ್ದ ಮಾಹಿತಿಗಳಿಗನುಗುಣವಾಗಿ ವಿದ್ಯಾರ್ಹತೆ, ಮೀಸಲಾತಿ ಮತ್ತಿತರೆ ಅಗತ್ಯ ದೃಢೀಕೃತ ಪ್ರತಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ದಾಖಲೆಗಳ ಪರಿಶೀಲನೆಯ ಹಂತದಲ್ಲಿದ್ದು ಶೀಘ್ರವಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು.
ಪ್ರಸ್ತುತ ಎಲ್ಲ ಸರಕಾರಿ ಪದವಿ ಕಾಲೇಜುಗಳಲ್ಲಿ ಆಯಾ ಕಾಲೇಜುಗಳ ಉಪನ್ಯಾಸಕರು ಸೇವಾ ಜೇಷ್ಟತೆಯಲ್ಲಿ ಹಿರಿಯರಾದವರನ್ನು ಪ್ರಾಂಶುಪಾಲರ ಪ್ರಭಾರದಲ್ಲಿ ಇರಿಸಲು ಕ್ರಮ ವಹಿಸಲಾಗಿದೆ. ಕಾಲೇಜಿನ ದೈನಂದಿನ ಆಡಳಿತ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಿರುವುದಿಲ್ಲ ಎಂದು ಅವರು ತಿಳಿಸಿದರು.