ಕಲಬುರಗಿ, ಬೀದರ್ ಸಹಿತ ಮೂರು ಜಿಲ್ಲೆಗಳಿಗೆ ಶೀತ ಗಾಳಿ ಬೀಸುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಬಂಗಾಳ ಕೊಲ್ಲಿ ಹಾಗು ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯು ಚಂಡಮಾರುತಗಳ ಕಾರಣ ರಾಜ್ಯದ ಒಳನಾಡಿನಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಿದ್ದು, ಉತ್ತರ ಒಳನಾಡಿನ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಿಗೆ ಎರಡು ದಿನಗಳ ಕಾಲ ತೀವ್ರ ಶೀತ ಗಾಳಿಯ ಅಲರ್ಟ್ ನೀಡಲಾಗಿದೆ.
ನಾಳೆಯಿಂದ(ಡಿ.17) ಎರಡು ದಿನ ಉತ್ತರ ಒಳನಾಡಿನ ಕಲಬುರಗಿ, ಬೀದರ್, ವಿಜಯಪುರ ತೀವ್ರ ಶೀತ ಗಾಳಿಯ ರೆಡ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಶೀತ ಅಲೆಯ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.
ತಾಪಮಾನವು 6 ರಿಂದ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇದು ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಇನ್ನು ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೀತ ಅಲೆಯು ಇರಲಿದ್ದು ಅಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ನಿರ್ಮಲ ಆಕಾಶ ಕಾಣಸಿಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಡಿಗ್ರಿ ಮತ್ತು 15 ಡಿಗ್ರಿ ದಾಖಲಾಗುವ ಸಂಭವವಿದೆ ಎಂದು ಮಾಹಿತಿ ನೀಡಿದೆ.