ಮೈಕ್ರೋ ಫೈನಾನ್ಸ್ಗಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ: ಅಂಕಿತ ಹಾಕದೆ ತಿರಸ್ಕರಿಸಿದ ರಾಜ್ಯಪಾಲರು

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಗಳನ್ನು ತಡೆ ಗಟ್ಟಲು ಉದ್ದೇಶಿಸಿ ರಾಜ್ಯ ಸರಕಾರ ಕಳುಹಿಸಿ ಕೊಟ್ಟಿದ್ದ ಮಹತ್ವದ ಸುಗ್ರೀವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕೆಲವು ಸ್ಪಷ್ಟನೆ ಹಾಗೂ ಸಲಹೆಗಳೊಂದಿಗೆ ಕಡತವನ್ನು ಶುಕ್ರವಾರ ವಾಪಸ್ ಕಳುಹಿಸಿದ್ದಾರೆ.
ಸಮಾಜದ ದುರ್ಬಲ ವ್ಯಕ್ತಿಗಳನ್ನು ರಕ್ಷಿಸಬೇಕಾದದ್ದು ಸರಕಾರದ ಕರ್ತವ್ಯವೇ ಆಗಿದ್ದರೂ, ಅಗತ್ಯವಿರುವ ವ್ಯಕ್ತಿಗಳಿಗೆ ಸದ್ಯ ಜಾರಿಯಲ್ಲಿರುವ ಕಾನೂನುಗಳಿಗೆ ಅನುಸಾರವಾಗಿ ಸೂಕ್ತ ಸಾಧಕ-ಬಾಧಕಗಳ ವ್ಯವಸ್ಥೆಯ ಅಡಿಯಲ್ಲಿ ಸಾಲ ನೀಡಿದ ವ್ಯಕ್ತಿಗಳ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಕೂಡ ಸರಕಾರದ ಕರ್ತವ್ಯವಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಎಲ್ಲಾ ಬಾಕಿ ಸಾಲಗಳನ್ನು ವಿಮೋಚನೆ ಗೊಳಿಸಿದರೆ ಕಾನೂನುಬದ್ದ ಮತ್ತು ನೈಜ ಸಾಲ ನೀಡಿದವರು ತೊಂದರೆ ಅನುಭವಿಸಬಹುದು. ಬಾಕಿಯಿರುವ ಸಾಲದ ಮೊತ್ತವನ್ನು ವಸೂಲಿ ಮಾಡಲು ಯಾವುದೇ ದಾರಿ ಕಾಣದೆ ಕಾನೂನಾತ್ಮಕ ಹೋರಾಟಕ್ಕೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಪರಿಹಾರಗಳಿಗಾಗಿ ಹೋರಾಟ ಮಾಡುವ ಹಕ್ಕು ಹೊಂದಿದ್ದಾರೆ. ಅವರು ತಮ್ಮ ಹಕ್ಕುಗಳಿಗಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಡುವುದನ್ನು ತಪ್ಪಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುಗ್ರೀವಾಜ್ಞೆ ಉಲ್ಲಂಘಿಸಿದವರಿಗೆ 10 ವರ್ಷಗಳವರೆಗೆ ಶಿಕ್ಷೆ ಮತ್ತು 5 ಲಕ್ಷ ರೂ. ವರೆಗೆ ದಂಡ ಹಾಗೂ ಈ ಸುಗ್ರೀವಾಜ್ಞೆಯ ಅಡಿಯಲ್ಲಿರುವ ಅಪರಾಧಗಳು ಜಾಮೀನು ರಹಿತವಾಗಿವೆ. ಕಿರು ಸಾಲ ಸಂಸ್ಥೆಗಳಿಂದ ಗರಿಷ್ಠ ಮೊತ್ತದ ಸಾಲವೇ ಮೂರು ಲಕ್ಷ ರೂ. ಇರುವಾಗ ಐದು ಲಕ್ಷ ರೂ. ದಂಡ ವಿಧಿಸುವುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ರಾಜ್ಯಪಾಲರು ಹೇಳಿದ್ದಾರೆ.
ಸಾಲ ನೀಡುವ ಸಂಸ್ಥೆಗಳು ತಾವು ನೀಡಿದ ಸಾಲಕ್ಕೆ ಯಾವುದೇ ಭದ್ರತೆ ಪಡೆಯದಂತೆ ಮತ್ತು ಈಗಾಗಲೇ ಪಡೆದಿರುವ ಭದ್ರತೆಗಳನ್ನು ಹಿಂದಿರುಗಿಸುವಂತೆ ಈ ಸುಗ್ರೀವಾಜ್ಞೆಯಲ್ಲಿ ಅವಕಾಶ ಒದಗಿಸಲಾಗಿದೆ. ಈ ನಿಬಂಧನೆಯು ಸರಕಾರಿ ಬ್ಯಾಂಕುಗಳು ಅವಲಂಬಿಸುವ ಸಾಲದ ನಿಯಮಗಳಿಗೆ ವಿರುದ್ಧವಾಗಿದೆ ಹಾಗೂ ಇದು ಸಾಲ ನೀಡುವ ವ್ಯವಸ್ಥೆಯ ಮೇಲೆ ದೀರ್ಘಾವಧಿ ಪರಿಣಾಮ ಉಂಟು ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ವಸಹಾಯ ಗುಂಪುಗಳ ವ್ಯಾಪಾರಿ ಭವಿಷ್ಯದ ಮೇಲೆಯೂ ಈ ಸುಗ್ರೀವಾಜ್ಞೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಿಸರ್ವ್ ಬ್ಯಾಂಕ್ನೊಂದಿಗೆ ನೋಂದಾಯಿತವಾದ ಯಾವುದೇ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಈ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ. ಆದುದರಿಂದ, ಅನೇಕ ಸಾಲ ನೀಡುವ ಸಂಸ್ಥೆಗಳು ಸುಗ್ರೀವಾಜ್ಞೆ ವ್ಯಾಪ್ತಿಯಿಂದ ಹೊರಗಿವೆ ಎಂದು ರಾಜ್ಯಪಾಲರು ಗಮನ ಸೆಳೆದಿದ್ದಾರೆ.
ಈ ಸಂಸ್ಥೆಗಳ ಒತ್ತಡ, ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಕಿರುಕುಳವನ್ನು ಪೊಲೀಸ್ ಮತ್ತು ಇತರ ಇಲಾಖಾ ಮೂಲಕ ತಡೆಯಲು ಕರ್ನಾಟಕ ಮನಿ ಲೆಂಡರ್ ಕಾಯ್ದೆ 1961, ನೆಗೋಷಿಯೇಬಲ್ ಇನ್ಸೂಟ್ರುಮೆಂಟ್ಸ್ ಕಾಯ್ದೆ 1881, ಕರ್ನಾಟಕ ಋಣ ಕಾಯ್ದೆ 1976 ಮತ್ತು ಭಾರತೀಯ ದಂಡ ಸಂಹಿತೆಯೊಂದಿಗೆ ಕರ್ನಾಟಕ ಪೊಲೀಸ್ ಕಾಯ್ದೆಗಳನ್ನು ಉಪಯೋಗಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಲಭ್ಯವಿರುವ ಕಾಯ್ದೆಯ ಅವಕಾಶಗಳನ್ನು ಅನುಷ್ಠಾನಗೊಳಿಸುವಲ್ಲಿ ಕೊರತೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿಯ ನ್ಯೂನತೆಗಳು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಲಭ್ಯವಿರುವ ಕಾನೂನಿನ ನಿಬಂಧನೆಗಳನ್ನು ದಕ್ಷತೆಯಿಂದ ಅನುಷ್ಠಾನಗೊಳಿಸುವ ಆಡಳಿತಾತ್ಮಕ ಯಂತ್ರಗಳ ಮೂಲಕ ಇಂತಹ ಸಮಸ್ಯೆಗಳನ್ನು ದಕ್ಷತೆಯಿಂದ ನಿಯಂತ್ರಿಸಬಹುದಾಗಿದೆ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.
ಬೇರೆ ಕಾನೂನುಗಳಲ್ಲಿ ಇಂತಹ ಅಪರಾಧಗಳಿಗೆ ನಿಬಂಧನೆಗಳು ಇಲ್ಲದೇ ಇದ್ದರೆ ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರುವುದು ಅಗತ್ಯವಾಗುತ್ತದೆ. ಆದರೆ, ಬೇರೆ ಕಾನೂನುಗಳಲ್ಲಿ ಪರಿಹಾರಗಳು ಲಭ್ಯವಿರುವಾಗ ಆ ನಿಬಂಧನೆಗಳನ್ನು ಜಾರಿ ಮಾಡಿ ಸಾಲ ಪಡೆದವರನ್ನು ಕಾನೂನು ಬಾಹಿರ ಕಿರುಕುಳ, ಹಿಂಸೆ ಮತ್ತು ರಿಸರ್ವ್ ಬ್ಯಾಂಕಿಂಗ್ ಮಾರ್ಗದರ್ಶಿ ಸೂತ್ರಗಳ ಮೂಲಕ ರಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಘಟನೆಗಳನ್ನು ತಡೆಯುವಲ್ಲಿ ಸುಗ್ರೀವಾಜ್ಞೆಯು ಹೇಗೆ ಅನುಕೂಲವಾಗುತ್ತಿದೆ ಎಂಬುದರ ಬಗ್ಗೆ ಅಂಕಿ-ಸಂಖ್ಯೆಗಳೊಂದಿಗೆ ವಿವರಣೆ ಅಥವಾ ಕಾನೂನು ಸಲಹೆ ಮೂಲಕ ಯಾವುದೇ ರೀತಿಯ ಶಿಫಾರಸು, ಸಲಹೆ ಕಡತದಲ್ಲಿ ಇಲ್ಲ. ಈ ಸುಗ್ರೀವಾಜ್ಞೆಯು ಸಾಲ ಪಡೆದವರಿಗೆ ನೆರವಾಗುತ್ತದೆ. ಆದರೆ ಸಾಲ ನೀಡುವವರ ಹಿತಾಸಕ್ತಿಗೆ ಬಾಧಿತವಾಗುತ್ತದೆ. ಆದುದರಿಂದ, ಈ ವಿಷಯವನ್ನು ವಿಧಾನಮಂಡಲದಲ್ಲಿ ವ್ಯಾಪಕವಾಗಿ ಚರ್ಚಿಸುವುದು ಅಗತ್ಯ ಎಂದು ರಾಜ್ಯಪಾಲ ಸಲಹೆ ನೀಡಿದ್ದಾರೆ.
ಮುಂದಿನ ಮಾರ್ಚ್ ತಿಂಗಳಿನಲ್ಲಿ ಬಜೆಟ್ ಅಧಿವೇಶನವು ಪ್ರಾರಂಭವಾಗುವುದರಿಂದ, ಅವಸರದಲ್ಲಿ ಸುಗ್ರೀವಾಜ್ಞೆ ತರುವ ಬದಲು ವಿಸ್ತ್ರತ ಚರ್ಚೆಯ ನಂತರ ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿಯಾದ ಶಾಸನವನ್ನು ರೂಪಿಸುವುದು ಸೂಕ್ತ ಎಂದು ಥಾವರ್ ಚಂದ್ ಗೆಹೋಟ್ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಈ ಮೇಲ್ಕಂಡ ಅಂಶಗಳು, ಸಲಹೆಗಳನ್ನು ಪರಿಗಣಿಸಿ, ಸ್ಪಷ್ಟಿಕರಣದೊಂದಿಗೆ ಕಡತವನ್ನು ಮರು ಸಲ್ಲಿಸಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವ ಮೂಲಕ ಕಡತವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.