‘ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ’ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳು ಸಾಲ ವಸೂಲಾತಿಗೆ ಕಾನೂನು ಬಾಹಿರ ಹಾಗೂ ಅಮಾನವೀಯ ಕ್ರಮ ಕೈಗೊಳ್ಳುವುದನ್ನು ತಡೆಗಟ್ಟಲು ಉದ್ದೇಶಿಸಿ ರಾಜ್ಯ ಸರಕಾರ ಎರಡನೆ ಬಾರಿ ಕಳುಹಿಸಿಕೊಟ್ಟಿದ್ದ ಮಹತ್ವದ ‘ಸುಗ್ರೀವಾಜ್ಞೆ’ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಅಂಕಿತ ಹಾಕಿದ್ದಾರೆ.
ಈ ಹಿಂದೆ ಕಳುಹಿಸಿಕೊಟ್ಟಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೆ, ಕೆಲವು ಸ್ಪಷ್ಟಣೆ ಹಾಗೂ ಸಲಹೆಗಳನ್ನು ನೀಡಿ ಕಡತವನ್ನು ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿದ್ದರು. ರಾಜ್ಯಪಾಲರು ಕೇಳಿದ ಎಲ್ಲ ಸ್ಪಷ್ಟಣೆಗಳಿಗೆ ಉತ್ತರಿಸಿ, ಎರಡನೆ ಬಾರಿಗೆ ಸುಗ್ರೀವಾಜ್ಞೆಯನ್ನು ರವಾನಿಸಲಾಗಿತ್ತು. ಬಜೆಟ್ ಅಧಿವೇಶನದಲ್ಲಿ ತಾವು ಕೊಟ್ಟಿರುವ ಸಲಹೆಗಳ ಕುರಿತು ಚರ್ಚಿಸಿ ಸೂಕ್ತ ಕಾನೂನು ರೂಪಿಸುವಂತೆ ಸೂಚಿಸಿ ‘ಸುಗ್ರೀವಾಜ್ಞೆ’ಗೆ ರಾಜ್ಯಪಾಲ ಅಂಕಿತ ಹಾಕಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಏನಿದೆ?: ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಯಾವುದೇ ರೀತಿಯ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು, ನಿಷೇಧಿಸಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ‘ಸುಗ್ರಿವಾಜ್ಞೆ’ ಜಾರಿಗೆ ತರಲಾಗಿದೆ.
ನೊಂದಾಯಿತವಲ್ಲದ ಮತ್ತು ಸಾಲ ನೀಡಲು ಪರವಾನಗೆ (ಲೈಸೆನ್ಸ್) ಹೊಂದಿರದ ಯಾವುದೇ ವ್ಯಕ್ತಿಯು ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ, ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿದರೆ, ಅದಕ್ಕೆ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವು ಅಲ್ಲ, ಯೋಗ್ಯವು ಅಲ್ಲ.
ಕಾನೂನಾತ್ಮಕ ಪ್ರಕ್ರಿಯೆಯನ್ನು ಕೈಗೊಂಡು ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹವೇ ಹೊರತು ಬೇರೆ ಯಾವುದೇ ಅಕ್ರಮ ಸಾಲದ ಮತ್ತು ಬಡ್ಡಿ ವಿಧಿಸಿದ ಸಾಲ ವಸೂಲಾತಿ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ಕಾನೂನಾತ್ಮಕವಾಗಿ ನ್ಯಾಯಾಲಯಗಳಿಗೆ ಸಾಧ್ಯವೇ ಇಲ್ಲ.
ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಒತ್ತಡ ತಂತ್ರ, ಹಿಂಸೆ, ಕಿರುಕುಳ ನೀಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ. ಸಾಲ ವಸೂಲಾತಿಯ ಸಂದರ್ಭದಲ್ಲಿ ಕೈಗೊಳ್ಳಬಹುದಾದ ನಿರ್ದಿಷ್ಟ ಅಪರಾಧಗಳನ್ನು ಮಾತ್ರ ಈ ಕಾನೂನಿನ ವ್ಯಾಪ್ತಿಗೆ ತರಲಾಗಿದೆ.
ಕಿರು ಸಾಲ ನೀಡುವ ಸಂಸ್ಥೆಗಳು ಯಾವುದೇ ಭದ್ರತೆಯನ್ನು ಪಡೆಯದೇ ಸಾಲ ನೀಡಬೇಕೆಂಬುದು ಭಾರತೀಯ ರಿಸರ್ವ್ ಬ್ಯಾಂಕಿ(ಆರ್‍ಬಿಐ)ನ ನಿಯಮಗಳಲ್ಲಿ ಸ್ಪಷ್ಟವಾಗಿ ವಿಧಿಸಲಾಗಿದೆ. ಆದುದರಿಂದ ಭದ್ರತೆಯನ್ನು ಪಡೆಯದೇ ಕಿರು ಸಾಲ ನೀಡಬೇಕು ಹಾಗೂ ಒಂದು ವೇಳೆ ಅಕ್ರಮವಾಗಿ ಭದ್ರತೆ ಪಡೆದಿದ್ದರೆ ಅಂತಹ ಭದ್ರತೆಗಳನ್ನು ವಾಪಸ್ಸು ನೀಡಬೇಕು.
ಸ್ವಸಹಾಯ ಸಂಘಗಳ ವ್ಯಾಪಾರದ ಭವಿಷ್ಯದ ಮೇಲೆ ಸುಗ್ರಿವಾಜ್ಞೆಯ ಪರಿಣಾಮ ಇರುವುದಿಲ್ಲ ಅಥವಾ ಅದು ಶೂನ್ಯವಾಗುತ್ತದೆ. ಕೇವಲ ಸಾಲ ನೀಡಿದ ಸಂಸ್ಥೆಯ ವಸೂಲಾತಿಯ ಕಾನೂನು ಬಾಹಿರ ಕ್ರಮಗಳನ್ನು ಮಾತ್ರ ಅಪರಾಧ ಎಂದು ಪರಿಗಣಿಸಲಾಗಿದೆ.
ನೊಂದಾಯಿತ ಸಂಸ್ಥೆಗಳ, ಬ್ಯಾಂಕುಗಳ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಸಾಲ ನೀಡುವಿಕೆ ಮತ್ತು ವಸೂಲಾತಿ ಪ್ರಕ್ರಿಯೆಯ ಬಗ್ಗೆ ಸುಗ್ರಿವಾಜ್ಞೆಯಲ್ಲಿ ಉಲ್ಲೇಖಿಸಿಲ್ಲ. ರಿಸರ್ವ್ ಬ್ಯಾಂಕಿನ ನಿಬಂಧನೆಗಳು ಲಭ್ಯವಿರುವಾಗ ನೊಂದಾಯಿತ ಸಂಸ್ಥೆಗಳಿಗೆ ಈ ಸುಗ್ರಿವಾಜ್ಞೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಸಾಲ ನೀಡುವವರ ಹಿತಗಳನ್ನು ನಿಯಮಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಸಾಲ ವಸೂಲಾತಿಯನ್ನು ನಿಷೇಧಿಸಿಲ್ಲ. ನಿಷೇಧಿತ ಚಟುವಟಿಕೆಗಳ ಮೂಲಕ ಸಾಲ ವಸೂಲಾತಿಯನ್ನು ತಡೆಯಲು ತುರ್ತಾಗಿ ಸುಗ್ರೀವಾಜ್ಞೆಯನ್ನು ಸರಕಾರ ಜಾರಿಗೆ ತಂದಿದೆ.
‘ಈ ಸುಗ್ರೀವಾಜ್ಞೆಯು ಮಸೂದೆಯಾಗಿ ವಿಧಾನಮಂಡಲದಲ್ಲಿ ಚರ್ಚೆಗೆ ಸಹಜವಾಗಿ ಮಂಡಿಸಲಾಗುತ್ತದೆ. ಆ ಸಂದರ್ಭದಲ್ಲಿ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ’
-ಎಚ್.ಕೆ.ಪಾಟೀಲ್, ಕಾನೂನು ಸಚಿವ
ರಾಜ್ಯಪಾಲರ ಆಕ್ಷೇಪಣೆಗಳು ಏನಿದ್ದವು?
► ಬಾಕಿ ಸಾಲಗಳನ್ನು ವಿಮೋಚನೆಗೊಳಿಸಿದರೆ ಕಾನೂನು ಬದ್ಧ ಮತ್ತು ನೈಜ ಸಾಲ ನೀಡಿದವರು ತೊಂದರೆ ಅನುಭವಿಸಬಹುದು.
► ಸುಗ್ರಿವಾಜ್ಞೆ ಉಲ್ಲಂಘಿಸಿದವರಿಗೆ 10 ವರ್ಷಗಳ ವರೆಗೆ ಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡ ಪ್ರಸ್ತಾಪಿಸಲಾಗಿದೆ. ಈ ಸುಗ್ರಿವಾಜ್ಞೆಯ ಅಡಿಯಲ್ಲಿರುವ ಅಪರಾಧಗಳು ಜಾಮೀನು ರಹಿತವಾಗಿವೆ. ಕಿರು ಸಾಲ ಸಂಸ್ಥೆಗಳಿಂದ ಗರಿಷ್ಠ ಮೊತ್ತದ ಸಾಲವೇ 3ಲಕ್ಷ ರೂ. ಇರುವಾಗ 5ಲಕ್ಷ ರೂ.ದಂಡ ವಿಧಿಸುವುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧ.
► ಸಾಲ ನೀಡುವ ಸಂಸ್ಥೆಗಳು ತಾವು ನೀಡಿದ ಸಾಲಕ್ಕೆ ಯಾವುದೇ ಭದ್ರತೆ ಪಡೆಯದಂತೆ ಮತ್ತು ಈಗಾಗಲೇ ಪಡೆದಿರುವ ಭದ್ರತೆಗಳನ್ನು ಹಿಂದಿರುಗಿಸುವಂತೆ ನಿಂಬಂಧನೆ ವಿಧಿಸಿರುವುದು ಸರಕಾರಿ ಬ್ಯಾಂಕುಗಳು ಅವಲಂಭಿಸುವ ಸಾಲದ ನಿಯಮಗಳಿಗೆ ವಿರುದ್ಧವಾಗಿದೆ. ಹಾಗೂ ಇದು ಸಾಲ ನೀಡುವ ವ್ಯವಸ್ಥೆಯ ಮೇಲೆ ದೀರ್ಘಾವಧಿ ಪರಿಣಾಮ ಉಂಟು ಮಾಡಲಿದೆ.
► ಸ್ವಸಹಾಯ ಗುಂಪುಗಳ ವ್ಯಾಪಾರಿ ಭವಿಷ್ಯದ ಮೇಲೆಯೂ ಈ ಸುಗ್ರೀವಾಜ್ಞೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಿಸರ್ವ್ ಬ್ಯಾಂಕ್‍ನೊಂದಿಗೆ ನೊಂದಾಯಿತವಾದ ಯಾವುದೇ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಈ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ. ಆದುದರಿಂದ, ಅನೇಕ ಸಾಲ ನೀಡುವ ಸಂಸ್ಥೆಗಳು ಸುಗ್ರೀವಾಜ್ಞೆ ವ್ಯಾಪ್ತಿಯಿಂದ ಹೊರಗುಳಿಯಲಿವೆ.
► ಈ ಸಂಸ್ಥೆಗಳ ಒತ್ತಡ, ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಕಿರುಕುಳವನ್ನು ಪೊಲೀಸ್ ಮತ್ತು ಇತರ ಇಲಾಖಾ ಮೂಲಕ ತಡೆಯಲು ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆ 1961, ನೆಗೋಷಿಬಲ್ ಇನ್ಸ್ಟ್ರೂಮೆಂಟ್ಸ್ ಕಾಯ್ದೆ 1881, ಕರ್ನಾಟಕ ಋಣ ಕಾಯ್ದೆ 1976 ಮತ್ತು ಭಾರತೀಯ ದಂಡ ಸಂಹಿತೆಯೊಂದಿಗೆ ಕರ್ನಾಟಕ ಪೊಲೀಸ್ ಕಾಯ್ದೆಗಳನ್ನು ಉಪಯೋಗಿಸಲು ಅವಕಾಶವಿದೆ.
► ಸಾಲ ಪಡೆದವರನ್ನು ಕಾನೂನು ಬಾಹಿರ ಕಿರುಕುಳ, ಹಿಂಸೆ ಮತ್ತು ರಿಸರ್ವ್ ಬ್ಯಾಂಕಿಂಗ್ ಮಾರ್ಗದರ್ಶಿ ಸೂತ್ರಗಳ ಮೂಲಕ ರಕ್ಷಿಸಬಹುದು. ಈ ಸುಗ್ರೀವಾಜ್ಞೆಯು ಸಾಲ ಪಡೆದವರಿಗೆ ನೆರವಾಗುತ್ತದೆ. ಸಾಲ ನೀಡುವವರ ಹಿತಾಸಕ್ತಿಗೆ ಬಾಧಿತವಾಗುತ್ತದೆ.