ಸರಕಾರ ಉರುಳಿಸಲು ಸಾವಿರ ಕೋಟಿ ರೂ.ಇಟ್ಟುಕೊಂಡಿರುವ ಮಹಾನಾಯಕ ಯಾರು? : ಸಚಿವ ಭೋಸರಾಜು
ಭೋಸರಾಜು/ಯತ್ನಾಳ್
ಬೆಂಗಳೂರು : ಕೇಂದ್ರದ ಮಾಜಿ ಸಚಿವ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಹುದ್ದೆಗೇರಲು ಮಹಾನ್ ನಾಯಕರೊಬ್ಬರೂ 1 ಸಾವಿರ ಕೋಟಿ ರೂ. ಇಟ್ಟುಕೊಂಡು ಕಾಯುತ್ತಿರುವುದಾಗಿ ಸ್ವಪಕ್ಷೀಯರ ಮೇಲೆ ಗುರುತರ ಆರೋಪ ಮಾಡಿದ್ದಾರೆ. ಇದು ಭ್ರಷ್ಟಾಚಾರದಿಂದ ಗಳಿಸಿದ ಹಣವಾಗಿದೆ ಎಂದು ಸ್ವತಃ ಯತ್ನಾಳ್ ಅವರೇ ಹೇಳಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ದಿನ ಬೆಳಗಾದರೆ ವಿರೋಧ ಪಕ್ಷಗಳ ನಾಯಕರ ಮನೆ ಮುಂದು ಹಾಜರಾಗುವ ಈಡಿ, ಸಿಬಿಐ ತನಿಖಾ ಸಂಸ್ಥೆಗಳು ಏನು ಮಾಡುತ್ತಿವೆ ಎಂಬ ಅನುಮಾನ ಕಾಡುತ್ತಿದೆ. ಈಡಿ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳು ಕೇವಲ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡುವುದಕ್ಕೆ ಮೀಸಲಾಗಿದ್ದಾವೆಯೇ ಎಂಬ ಅನುಮಾನ ಕಾಡದಿರದು ಎಂದು ಹೇಳಿದ್ದಾರೆ.
ನಾ ಖಾವುಂಗಾ, ನಾ ಖಾನೆ ದೂಂಗಾ ಎಂದು ಅಬ್ಬರಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂತಹ ಗಂಭೀರ ಆರೋಪಗಳು ಕೇಳಿಸುತ್ತಿಲ್ಲವೇ? ಈ ಹಿಂದೆ ಮುಖ್ಯಮಂತ್ರಿ ಹುದ್ದೆ 2500 ಕೋಟಿ ರೂ.ಗೆ ಬಿಕರಿಯಿದೆ ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ನರೇಂದ್ರ ಮೋದಿ ಮೇಲೆ ಆಪಾದನೆ ಬರುವಂತೆ ಮಾಡಿದ್ದರು ಎಂದು ಭೊಸರಾಜು ತಿಳಿಸಿದ್ದಾರೆ.
ಯತ್ನಾಳ್ ಅವರ ಮಾತನ್ನು ಹಾರಿಕೆಯ ಮಾತೆಂದು ಬದಿಗೆ ಸರಿಸಲು ಸಾಧ್ಯವಿಲ್ಲ, ಯತ್ನಾಳ್ ಕೇಂದ್ರ ಮಂತ್ರಿಯಾಗಿದ್ದವರು, ಈ ತಕ್ಷಣ 1 ಸಾವಿರ ಕೋಟಿ ರೂ.ಇಟ್ಟುಕೊಂಡು ಕಾಯುತ್ತಿರುವ ಆ ಮಹಾನಾಯಕ ಯಾರು ಎಂದು ಅವರು ಬಹಿರಂಗ ಪಡಿಸಬೇಕು ಅಥವಾ ಈ ಆರೋಪ ಸುಳ್ಳು ಎಂದಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.