‘ಕೆರೆಗಳು, ಬ್ಯಾರೇಜ್‍ಗಳಲ್ಲಿ ನೀರು ಪೋಲಾಗುವುದನ್ನು ತಡೆಗಟ್ಟಿ : ಅಧಿಕಾರಿಗಳಿಗೆ ಸಚಿವ ಭೋಸರಾಜು ಸೂಚನೆ
ಬೆಂಗಳೂರು: ಬರಗಾಲದಿಂದ ಬಳಲಿದ್ದ ರಾಜ್ಯಕ್ಕೆ ಉತ್ತಮ ಮುಂಗಾರಿನ ಆರಂಭವಾಗಿದೆ. ಈ ಮಳೆಯ ನೀರನ್ನು ಸಣ್ಣ ನೀರಾವರಿ ಕೆರೆಗಳು, ಬ್ಯಾರೇಜ್ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ಸಮರ್ಪಕವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ನೀರು ಸೋರಿಕೆಯಿಂದ ಪೋಲಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರನ್ನಾಗಿಸುವುದಾಗಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಖಡಕ್ ಸೂಚನೆ ನೀಡಿದರು.
ಶನಿವಾರ ವಿಕಾಸಸೌಧಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 3685 ಕೆರೆಗಳಿವೆ. ವಿಭಾಗವಾರು ಸಣ್ಣ ನೀರಾವರಿ ಕೆರೆಗಳಲ್ಲಿನ ಪ್ರಸಕ್ತ ನೀರಿನ ಸಂಗ್ರಹ ಹಾಗೂ ಕೆರೆಗಳ ಸ್ಥಿತಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ನೀರು ಸಂಗ್ರಹಿಸಲು ಆದ್ಯತೆ ನೀಡಿ: ಬರಗಾಲದಿಂದ ತತ್ತರಿಸಿದ್ದ ರಾಜ್ಯಕ್ಕೆ ಉತ್ತಮ ಮುಂಗಾರಿನ ಪ್ರವೇಶವಾಗಿದೆ. ಈ ನೀರಿನ ಸಮರ್ಪಕ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವುದರಿಂದ ರೈತಾಪಿ ಜನರಿಗೆ ವರ್ಷಪೂರ್ತಿ ಅನುಕೂಲವಾಗುತ್ತದೆ. ಇದನ್ನ ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಯಾವುದೇ ಅವಘಡಗಳನ್ನು ನಿರ್ವಹಿಸಲು ಸಜ್ಜಾಗಿ: ಮಳೆಗಾಲದಲ್ಲಿ ಕೆರೆಗಳ ಕೋಡಿಗಳು ಒಡೆಯುವ, ಬ್ಯಾರೇಜ್ ಮತ್ತು ಕಿಂಡಿ ಅಣೆಕಟ್ಟುಗಳಿಂದ ನೀರು ಸೋರಿಕೆ ಆಗುವ ಸಂದರ್ಭಗಳು ಹೆಚ್ಚಾಗುತ್ತವೆ. ಈಗಾಗಲೇ ಬೀದರ್ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಎದುರಾಗಿವೆ. ಇಂತಹ ಅವಘಡಗಳು ಎದುರಾದ ಸಂದರ್ಭಗಳಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ವಹಿಸಲು ಸಜ್ಜಾಗಿರಬೇಕು. ನೀರು ಸೋರಿಕೆಯನ್ನು ಶೀಘ್ರವಾಗಿ ತಡೆಗಟ್ಟುಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭೋಸರಾಜು ಸೂಚನೆ ನೀಡಿದರು.
ನೀರು ಹರಿಯುವ ದಾರಿಯನ್ನು ಸುಗುಮಗೊಳಿಸಿ: ಕೆರೆಗಳು, ಬ್ಯಾರೇಜ್ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಹರಿದು ಬರುವಂತಹ ದಾರಿಗಳನ್ನು ಸುಗುಮಗೊಳಿಸಬೇಕು. ಯಾವುದೇ ಅಡೆತಡೆಗಳಿಂದ ನೀರು ಕೆರೆಗೆ ಸಂಗ್ರಹವಾಗದೆ ಪೋಲಾದರೆ ಮುಂದಿನ ದಿನಗಳಲ್ಲಿ ಆಯಾ ಭಾಗದ ಜನರು ತೊಂದರೆಗೀಡಾಗಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಅವರು ತಿಳಿಸಿದರು.
ಆಯವ್ಯಯ ಘೋಷಣೆ ಅನುಷ್ಠಾನಕ್ಕೆ ಸೂಚನೆ: ಬಾಕಿ ಇರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಭೋಸರಾಜು, ಬಾಕಿ ಇರುವಂತಹ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಇದೇ ವೇಳೇ, 2024-25 ಸಾಲಿನ ಆಯವ್ಯಯದಲ್ಲಿ ಸುಮಾರು 8 ಕಾಮಗಾರಿಗಳ ಘೋಷಣೆಯನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಈ ತಿಂಗಳಾಂತ್ಯಕ್ಕೆ ಅವುಗಳ ಟೆಂಡರ್ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಿದರು.
ಪಿಎಂಕೆಎಸ್‍ಎಸ್‍ವೈ ಹಾಗೂ ಆರ್‌ಆರ್‌ಆರ್ ಯೋಜನೆಗಳ ಅಡಿಯಲ್ಲಿ ಈಗಾಗಲೇ ಹಲವಾರು ಪ್ರಸ್ತಾವನೆಗಳು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳ ಈ ಹಂತದ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಕ್ರೋಢೀಕರಿಸಬೇಕು. ಪ್ರತಿ ವಿಭಾಗದಿಂದಲೂ ಅಗತ್ಯವಿರುವ ಹೊಸ ಯೋಜನೆಗಳ ಬಗ್ಗೆಯೂ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಿ ಕೇಂದ್ರ ಕಚೇರಿಗೆ ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದರು.
ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ಅಧಿಕ್ಷಕ ಇಂಜಿನಿಯರ್ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಆಯಾ ಸಮಯದಲ್ಲಿ ಕೇಂದ್ರ ಕಚೇರಿಗೆ ವರದಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ಜುಲೈ ಮೊದಲ ವಾರದಲ್ಲಿ ಮತ್ತೊಮ್ಮೆ ಸಭೆ: ಈ ಎಲ್ಲ ಕ್ರಮಗಳ ಬಗ್ಗೆ ಅನುಷ್ಠಾನ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಬೇಕು. ಜುಲೈ ಮುಂದಿನ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಪರಿಶೀಲನೆ ನಡೆಸುವುದಾಗಿ ಭೋಸರಾಜು ತಿಳಿಸಿದರು. ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.