2023-24ರ ಸಾಲಿನ 2,021ಕೋಟಿ ರೂ.ಬೆಳೆ ವಿಮೆ ಪರಿಹಾರ ಇತ್ಯರ್ಥ : ಸಚಿವ ಚಲುವರಾಯಸ್ವಾಮಿ
ಸಚಿವ ಎನ್.ಚಲುವರಾಯಸ್ವಾಮಿ
ಬೆಂಗಳೂರು : ರಾಜ್ಯದಲ್ಲಿ 2023-24ನೆ ಸಾಲಿನಲ್ಲಿ ಒಟ್ಟು 17.61ಲಕ್ಷ ರೈತ ಫಲಾನುಭವಿಗಳಿಗೆ 2021.17 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರವನ್ನು ಇತ್ಯರ್ಥಪಡಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಮುಂಗಾರು 2024ರ ಹಂಗಾಮಿನಲ್ಲಿ 22.97 ಲಕ್ಷ ರೈತ ಪ್ರಸ್ತಾವನೆಗಳು 17.60ಲಕ್ಷ ಹೇಕ್ಟೆರ್ ಪ್ರದೇಶಕ್ಕೆ ನೋಂದಣಿಯಾಗಿದ್ದು, 2024-25ನೆ ಸಾಲಿನ ಹಿಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 25,148 ರೈತ ಪ್ರಸ್ತಾವನೆಗಳು 31,690.28ಹೆಕ್ಟೇರ್ ಪ್ರದೇಶಕ್ಕೆ ನೋಂದಣಿಯಾಗಿದ್ದು ನೋಂದಣಿ ಕಾರ್ಯವು ಪ್ರಗತಿಯಲ್ಲಿದೆ ಎಂದರು.
2023-24ನೇ ಸಾಲಿನಲ್ಲಿ 3.07 ಲಕ್ಷ ರೈತರಿಗೆ 3.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ/ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 627.10 ಕೋಟಿ ರೂ. ಸಹಾಯಧನವನ್ನು ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 1,09,250 ರೈತ ಫಲಾನುಭವಿಗಳಿಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನ ನೀಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
2023-24ನೇ ಸಾಲಿನಲ್ಲಿ ಕೃಷಿಯಲ್ಲಿ ಯಾಂತ್ರೀಕತೆಯನ್ನು ಪ್ರೋತ್ಸಾಹಿಸಲು ಅನುವಾಗುವಂತೆ 433.92 ಕೋಟಿ ರೂ.ಗಳ ವೆಚ್ಚದಲ್ಲಿ 1,16,181 ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 20,301 ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ವಿತರಣೆ ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ 2023-24ನೇ ಸಾಲಿನಲ್ಲಿ 104 ಹೈಟೆಕ್ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆಗೆ 41.39 ಕೋಟಿ ರೂ.ಗಳ ಸಹಾಯಧನ ನೀಡಲಾಗಿದ್ದು, 2024-25ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು 45 ಕೋಟಿ ರೂ.ಗಳ ಅನುದಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು 82.48 ಲಕ್ಷ ಹೆಕ್ಟೇರ್ ಗುರಿಗೆ 81.36 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇ.99ರಷ್ಟು ಬಿತ್ತನೆಯಾಗಿರುತ್ತದೆ. 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 25.53 ಲಕ್ಷ ಹೆಕ್ಟೇರ್ ಪ್ರತಿಯಾಗಿ 13.38 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇ.52ರಷ್ಟು ಬಿತ್ತನೆಯಾಗಿದ್ದು ಡಿಸೆಂಬರ್ ವರೆಗೂ ಬಿತ್ತನೆಯಾಗಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ದ್ವಿದಳ ಧಾನ್ಯ ಪ್ರಾತ್ಯಕ್ಷಿಕೆಗಳಿಗೆ 2024-25ನೇ ಸಾಲಿನಲ್ಲಿ 121.56 ಕೋಟಿ ಹಾಗೂ ಹೆಚ್ಚುವರಿ ಅನುದಾನ 63.42 ಕೋಟಿ ಒಳಗೊಂಡಂತೆ ಒಟ್ಟು 184.98 ಕೋಟಿ ರೂ. ಅನುದಾನದಲ್ಲಿ ದ್ವಿದಳ ಧಾನ್ಯ ವಿಸ್ತೀರ್ಣ ಹೆಚ್ಚಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ದ್ವಿದಳ ಧಾನ್ಯ ಕಾರ್ಯಕ್ರಮದಡಿ 100ಹೆಕ್ಟೇರ್ ಪ್ರದೇಶದಂತೆ ಗುಚ್ಚ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 75,500 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ನೂತನ ತಾಂತ್ರಿಕತೆಗಳ ಪರಿಚಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗಿದೆ ಅಲ್ಲದೇ ಬೆಳೆ ಸಾಂದ್ರತೆ ಶೇ.100ರಿಂದ ಶೇ.175ರಷ್ಟು ಹೆಚ್ಚಳವಾಗಲಿದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ನಿರ್ದೇಶಕ ಬಂತನಾಳ, ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.