ಆರೋಗ್ಯ ನಿರೀಕ್ಷಕರ ಹುದ್ದೆ ಭರ್ತಿಗೆ ಕ್ರಮ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ರಾಜ್ಯದಲ್ಲಿ 5,944 ಆರೋಗ್ಯ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 3950 ಆರೋಗ್ಯ ನಿರೀಕ್ಷಕ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಭರ್ತಿಯಾಗದೆ ಖಾಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 8 ವರ್ಷಗಳಿಂದ ಆರೋಗ್ಯ ನಿರೀಕ್ಷಕರ ಹುದ್ದೆಗಳ ಭರ್ತಿ ಆಗಿಲ್ಲ ಎನ್ನುವ ಆರೋಪ ಸರಿಯಿದೆ. ಶೇ.40ರಷ್ಟು ಖಾಲಿಯಿರುವ ಈ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಬೇಕು. ಹೀಗಾಗಿ ಮೊದಲು ಗುತ್ತಿಗೆ ಆಧಾರದಲ್ಲಿ ಹುದ್ದೆಗಳ ಭರ್ತಿ ಮಾಡಿ ನಂತರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಶುಚಿ ಯೋಜನೆಯಡಿ ಶಾಲಾ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಕೊಡಲಾಗುತ್ತಿದೆ. ಮೆನ್ಯುಸ್ಟ್ರಿಯಲ್ ಕಪ್ ಅನ್ನು ಎರಡು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ, ಇದು ದೀರ್ಘಾವಧಿಗೆ ಬಳಸಿಕೊಳ್ಳಬಹುದು. ಹಾಗಾಗಿ ಮೆನುಸ್ಟ್ರಿಯಲ್ ಕಪ್ ನೀಡುವ ಚಿಂತನೆ ಇದೆ ಎಂದು ಅವರು ತಿಳಿಸಿದರು.