ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರ ಕೈಬಿಡುವಂತೆ ಸಚಿವ ದಿನೇಶ್ ಗುಂಡೂರಾವ್ ಮನವಿ
ಬೆಂಗಳೂರು: ಡಯಾಲಿಸಿಸ್ ಸಿಬ್ಬಂದಿಗಳಿಗೆ ಬಿಆರ್‌ಎಸ್ ಹಾಗೂ ಇಎಸ್‍ಕೆಎಜಿ ಸಂಸ್ಥೆಯ ವತಿಯಿಂದ ಪಾವತಿಯಾಗಬೇಕಿರುವ ಇಎಸ್‍ಐ, ಪಿಎಫ್ ಹಾಗೂ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ, ಸಿಬ್ಬಂದಿಗಳು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಆರ್‌ಎಸ್ ಸಂಸ್ಥೆಯವರು ನೀಡಬೇಕಾಗಿರುವ 9 ತಿಂಗಳ ಇಎಸ್‍ಐ ಹಾಗೂ ಪಿಎಫ್, ಇಎಸ್‍ಕೆಎಜಿ ಸಂಸ್ಥೆಯವರು ನೀಡಬೇಕಾಗಿರುವ 20 ತಿಂಗಳ ಇಎಸ್‍ಐ ಮತ್ತು ಪಿಎಫ್ ಹಾಗೂ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಮಾಸಿಕ ವೇತನವನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆದು, ನಂತರ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮೂಲಕ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
2017-18ನೇ ಸಾಲಿನಿಂದ ಡಯಾಲಿಸಿಸ್ ಟೆಂಡರ್ ದಾರರಾದ ಬಿಆರ್‌ಎಸ್ ಸಂಸ್ಥೆಯವರು ಹಾಗೂ ಇಎಸ್‍ಕೆಎಜಿ ಸಂಸ್ಥೆಯವರು ಡಯಾಲಿಸಿಸ್ ನೌಕರರ ವೇತನ, ಇಎಸ್‍ಐ ಮತ್ತು ಪಿಎಫ್ ಕಾಲ ಕಾಲಕ್ಕೆ ಸರಿಯಾಗಿ ಪಾವತಿಸಿಲ್ಲ. ಈ ಕುರಿತು ಡಯಾಲಿಸಿಸ್ ಸಿಬ್ಬಂದಿಗಳು ನನ್ನನ್ನು ಭೇಟಿ ಮಾಡಿ ಚರ್ಚಿಸಿದಾಗ ಸಂಸ್ಥೆಯವರನ್ನು ಕರೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಸೂಚಿಸಿದ್ದಲ್ಲದೆ, ಎಚ್ಚರಿಕೆಯನ್ನು ನೀಡಿದ್ದೆ ಎಂದು ಅವರು ಹೇಳಿದ್ದಾರೆ.
ಏಜೆನ್ಸಿಯವರು ಡಯಾಲಿಸಿಸ್ ಆರೋಗ್ಯ ಸೇವೆಯನ್ನ ಸರಿಯಾಗಿ ನಿರ್ವಹಿಸದೇ ಇರುವುದು ನನ್ನ ಗಮನಕ್ಕೆ ಬಂದಿದ್ದು, ರಾಜ್ಯದಲ್ಲಿ ಸಂಪೂರ್ಣ ಡಯಾಲಿಸಿಸ್ ವ್ಯವಸ್ಥೆಯನ್ನು ಸದೃಢಗೊಳಿಸುವ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಆರ್‌ಎಸ್ ಹಾಗೂ ಇಎಸ್‍ಕೆಎಜಿ ಸಂಸ್ಥೆಯವರು ಡಯಾಲಿಸಿಸ್ ನೌಕರರ ವೇತನ, ಇಎಸ್‍ಐ ಹಾಗೂ ಪಿಎಫ್ ಹಾಗೂ ಹೆಚ್ಚುವರಿ ವೇತನವನ್ನು ಬಿಡುಗಡೆಗೊಳಿಸದೆ ಇರುವುದಕ್ಕೆ ಡಯಾಲಿಸಿಸ್ ಸಿಬ್ಬಂದಿ ವರ್ಗದವರು ಮುಷ್ಕರದಲ್ಲಿ ಪಾಲ್ಗೊಳ್ಳಲು ಮೂಲ ಕಾರಣವಾಗಿದೆ. ಈ ಸಂಸ್ಥೆಯವರನ್ನು ಕಪ್ಪು ಪಟ್ಟಿಗೆ ಸೇರಿಸುವುದರ ಜೊತೆಗೆ, ಸಿಬ್ಬಂದಿಗಳು ಇಎಸ್‍ಐ, ಪಿಎಫ್ ಬಿಡುಗಡೆಗೆ ಆರೋಗ್ಯ ಇಲಾಖೆ ಕ್ರಮ ವಹಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.