‘ಅಸಹನೆ ಬಿಟ್ಟು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆಯಿರಿ’ : ಪೇಜಾವರ ಮಠದ ಶ್ರೀಗಳಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ
ಎಚ್.ಸಿ.ಮಹದೇವಪ್ಪ
ಬೆಂಗಳೂರು: ‘ಸನಾತನ ಧರ್ಮ’ ಎಷ್ಟರ ಮಟ್ಟಿಗೆ ಪರಿಶಿಷ್ಟರ ಬದುಕನ್ನು ಅವಮಾನಿಸಿದೆ ಎನ್ನುವುದಕ್ಕೆ ಪರಿಶಿಷ್ಟರ ಅನುಭವಕ್ಕಿಂತ ಉದಾಹರಣೆ ಇನ್ನೊಂದಿಲ್ಲ. ಹೀಗಾಗಿ ಸಮಾನತೆಯ ಸಂಜೀವಿನಿ ಡಾ.ಅಂಬೇಡ್ಕರ್ ರೂಪಿಸಿರುವ ಸಂವಿಧಾನ ಕುರಿತಂತೆ ಅಸಹನೆ ಬಿಟ್ಟು ಅದರ ಆಶಯಕ್ಕನುಸಾರವಾಗಿ ನಡೆಯಿರಿ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ವಿಎಚ್ಪಿ ಆಯೋಜಿಸಿದ್ದ ‘ಸಂತರ ಸಮಾವೇಶ’ದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ‘ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಸ್ವಾತಂತ್ರ್ಯ ಹೊಂದಿದ್ದೇವೆಯೇ?’ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಸನಾತನ ಮಂಡಳಿ ರಚಿಸಬೇಕು’ ಎಂದು ಕೋರಿದ್ದಾರೆ.
‘ಶ್ರೀಗಳೇ, ಜಾತಿ ಮತ್ತು ಧರ್ಮದ ಶ್ರೇಷ್ಠತೆಯ ಕಾರಣಕ್ಕೆ ಅಸಮಾನತೆ, ಅವಮಾನ ಮತ್ತು ದೌರ್ಜನ್ಯದ ಕೂಪವಾಗಿದ್ದ ಸನಾತನ ಧರ್ಮದ ಕೆಟ್ಟ ನಡವಳಿಕೆಗಳನ್ನು ದೂರ ಮಾಡಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುವ ಮಹೋನ್ನತ ಉದ್ದೇಶದಿಂದ ಅಂಬೇಡ್ಕರ್ ಅವರು ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
‘ಭಾರತದ ಪ್ರಜೆಗಳಾದ ನಾವು ಏನು ಮಾಡಬೇಕೆಂಬ ಕರ್ತವ್ಯ ಪ್ರಜ್ಞೆಯ ಜೊತೆಗೆ ನಮ್ಮ ಹಕ್ಕುಗಳು ಯಾವುವು ಎಂಬುದನ್ನೂ ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಇಲ್ಲಿ ನೀವು, ಹೇಳುವ ಧರ್ಮ ಮತ್ತಿತರೆ ಆಚರಣೆಗಳು ಸಂವಿಧಾನದ ಪರಿಮಿತಿಯಲ್ಲೇ ಬರುವ ಕಾರಣ ಇಲ್ಲಿ ಯಾರೂ Extra constitutional authority ಅಲ್ಲ ಎಂಬುದನ್ನು ಮೊದಲು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ತಮಗೆ ತಿಳಿಯಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಧರ್ಮಕ್ಕೂ ರಾಜಕೀಯಕ್ಕೂ ಸಂಬಂಧ ಬೆರೆಸಿ ಧರ್ಮವನ್ನು ರಾಜಕೀಯ ಪಕ್ಷಗಳಿಗೆ ಸೀಮಿತಗೊಳಿಸುವ ಕೆಲಸ ಮಾಡುವ ಬದಲು, ವಿಶ್ವಗುರು ಬಸವಣ್ಣ, ವಿಶ್ವಚೇತನ ಸ್ವಾಮಿ ವಿವೇಕಾನಂದರು ಧರ್ಮದ ಬಗ್ಗೆ ಆಡಿರುವ ಮಾತುಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜಕ್ಕೆ ತಿಳಿಸುವುದು ನಿಜವಾದ ಧರ್ಮ ಸೇವೆ’ ಎಂದು ಮಹದೇವಪ್ಪ, ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.