ವಿಧಾನಸೌಧದ ಪೂರ್ವ ಗೇಟ್ ತೆರೆಯುವಂತೆ ಸ್ಪೀಕರ್ ಗೆ ಸಚಿವ ಜಾರ್ಜ್ ಮನವಿ; ಕಾರಣವೇನು ?

ಬೆಂಗಳೂರು: ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ವಿಧಾನಸೌಧದ ಪೂರ್ವ ಗೇಟ್ ತೆರೆಯುವಂತೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಸಚಿವ ಕೆ.ಜೆ.ಜಾರ್ಜ್ ಮನವಿ ಮಾಡಿದ್ದಾರೆ.
ವಿಧಾನಸೌಧದ ಸುತ್ತಮುತ್ತ ಸಂಚಾರ ದಟ್ಟಣೆ ಇರುವ ಕಾರಣ ಪೂರ್ವ ಗೇಟ್ ತೆರೆಯುವಂತೆ ಸಚಿವರು ಸ್ಪೀಕರ್ ಗಮನಕ್ಕೆ ತಂದಾಗ, ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಅರ್ಧ ಗಂಟೆ ಮೊದಲೇ ಬಂದರೆ ಬೇಗ ಸದನಕ್ಕೆ ತಲುಪಬಹುದು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, 'ಬೇಕಾದರೆ 3 ಗಂಟೆಗಳ ಕಾಲ ಮೊದಲೇ ಹೊರಡುತ್ತೇವೆ. ಅದಕ್ಕೇನು ಸಮಸ್ಯೆ ಇಲ್ಲ, ಕನಿಷ್ಠ ಅಧಿವೇಶನದ ಸಮಯದಲ್ಲಾದರೂ ಗೇಟ್ ಓಪನ್ ಮಾಡುವಂತೆ ಆದೇಶ ಹೊರಡಿಸಿ' ಎಂದು ಮನವಿ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅಶೋಕ್ ಪಟ್ಟಣ್ ಕೂಡ ಅಧಿವೇಶನ ಮುಗಿಯುವವರೆಗೆ ಸಚಿವರಿಗಾಗಿ ಗೇಟ್ ಓಪನ್ ಮಾಡಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಚರ್ಚೆ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದು ಸ್ಪೀಕರ್ ಭರವಸೆ ನೀಡಿದರು.
Next Story